ನವದೆಹಲಿ: ಸೇನಾ ಸಿಬ್ಬಂದಿ ಮತ್ತು ಉಪಕರಣಗಳನ್ನು ಹೊತ್ತು ಬಂಗಾಳ ಕೊಲ್ಲಿ ಮೇಲೆ ಹಾರಾಟ ನಡೆಸುತ್ತಿದ್ದ ಕಣ್ಮರೆಯಾಗಿರುವ ವಿಮಾನ ಎಎನ್-32 ರಲ್ಲಿ ನೀರೊಳಗಿನ ಪತ್ತೆಕಾರಕ ವ್ಯವಸ್ಥೆಯಿರಲಿಲ್ಲ. ಹಾಗಾಗಿ ರಕ್ಷಣಾ ಪಡೆಗಳಿಗೆ ವಿಮಾನ ಎಲ್ಲಿ ಬಿದ್ದಿರಬಹುದು ಎಂದು ಹುಡುಕಾಡಲು ಕಷ್ಟವಾಗುತ್ತಿದೆ.
ವಾಸ್ತವವಾಗಿ ಹೇಳಬೇಕೆಂದರೆ, ಆಧುನಿಕ ಸಾಗಾಣಿಕ ವಿಮಾನಗಳಾದ ಸಿ130 ಜೆ ಅಥವಾ ಸಿ17ನಂತೆ ಸೇನಾ ಪಡೆಯ ಎಎನ್-32 ಮಾದರಿಯ ಯಾವುದೇ ವಿಮಾನದಲ್ಲಿ ಅಂತರ್ಜಲ ಪತ್ತೇಕಾರಕ ವ್ಯವಸ್ಥೆಯಿಲ್ಲ. ಇದರರ್ಥ 29 ಸೇನಾ ಸಿಬ್ಬಂದಿಗಳನ್ನು ಹೊತ್ತು ಜುಲೈ 22ರಂದು ಸಾಗಿದ ಎಎನ್ -32 ವಿಮಾನ ಎಲ್ಲಿ ಬಿದ್ದಿರಬಹುದೆಂಬ ಆಲೋಚನೆಗೇ ಸಿಗುತ್ತಿಲ್ಲ.
ಶೋಧಕಾರ್ಯ ಇಂದು 11ನೇ ದಿನಕ್ಕೆ ಕಾಲಿಟ್ಟಿದ್ದು, ವಿಮಾನ ಕಣ್ಮರೆಯಾಗುವುದಕ್ಕೆ ಮುನ್ನ ಕಡೆಯ ಸ್ಥಾನದ ಅಂದಾಜನ್ನು ಇಟ್ಟುಕೊಂಡು ಹುಡುಕಾಟ ನಡೆಸುತ್ತಿದ್ದಾರೆ.
ವಿಮಾನವನ್ನು ಪತ್ತೆಹಚ್ಚಲು ಜಲಾಂತರ್ಗಾಮಿ ಸೋನಾರ್, ನೌಕೆ ಮತ್ತು ಇತರ ನೌಕಾ ವಸ್ತುಗಳನ್ನು ಬಳಸಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ಶೋಧ ಕಾರ್ಯ ಮುಂದುವರಿಯುತ್ತದೆ ಎಂದು ಅದು ಹೇಳಿದೆ.