ಮಥುರಾ: ಮಥುರಾದಲ್ಲಿ ನಡೆದಿರುವ ಘರ್ಷಣೆಯ ಪ್ರಕರಣವನ್ನು ಸಿಬಿಐ ತನಿಖೆಗ ವಹಿಸಬೇಕು ಎಂದು ಮಥುರಾ ಸಂಸದೆ ಹೇಮಾಮಾಲಿನಿ ಆಗ್ರಹಿಸಿದ್ದಾರೆ.
ಮಥುರಾದಲ್ಲಿ ಘರ್ಷಣೆ ಸಂಭವಿಸಿ 24ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರಬೇಕಾದರೆ, ಅಲ್ಲಿನ ಸಂಸದೆ ಹೇಮಾಮಾಲಿನಿ ಅವರು ತಮ್ಮ ನೂತನ ಚಿತ್ರದ ಫೋಟೋಶೂಟ್ ಗಳನ್ನು ಟ್ವಿಟರ್ ನಲ್ಲಿ ಅಪಲೋಡ್ ಮಾಡಿ ಟೀಕೆಗೆ ಗುರಿಯಾಗಿದ್ದು, ತಕ್ಷಣ ಅದನ್ನು ಡಿಲೀಟ್ ಮಾಡಿ ಸುದ್ದಿಯಾಗಿದ್ದರು.
ಇಂದು ಮಥುರಾ ಘರ್ಷಣೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿರುವ ಅವರು, ಘರ್ಷಣೆ ಸ್ಥಳದಲ್ಲಿ 3000ಕ್ಕೂ ಹೆಚ್ಚು ಆಯುಧಗಳು ಪತ್ತೆಯಾಗಿವೆ. ಇದರ ಬಗ್ಗೆ ಆಡಳಿತಕ್ಕೆ ಏಕೆ ತಿಳಿದಿರಲಿಲ್ಲ? ಜನರ ಬಳಿ ಆಯುಧಗಳಿರುವುದು ಆಡಳಿತಕ್ಕೆ ತಿಳಿದಿತ್ತು, ಆದರೆ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಮಾಮಾಲಿನಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ. ಹೈಕೋರ್ಟ್ ಆದೇಶ ಬಂದ ಮೇಲೆ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರ ಮುಂದಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದ ಹಿನ್ನಲೆಯಲ್ಲಿ ಈ ಘರ್ಷಣೆ ಸಂಭವಿಸಿದೆ. ಹಾಗಾಗಿ, ಈ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈ ಪ್ರಕರಣದಲ್ಲಿ ಅದು ವಿಫಲವಾಗಿದೆ. ಅಲ್ಲದೇ ಘಟನೆಯ ದಿಕ್ಕು ಬದಲಾಯಿಸಲಾಗುತ್ತಿದೆ ಎಂದು ಅವರು, ನನ್ನನ್ನು ಏಕೆ ಗುರಿಯಾಗಿಸಿಕೊಂಡರು, ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಮಾಮಾಲಿನಿ ಟ್ವೀಟ್ ಮಾಡಿದ್ದಾರೆ.