ನವದೆಹಲಿ: ಎರಡು ವರ್ಷಗಳ ಹಿಂದೆ 52 ವರ್ಷದ ಡ್ಯಾನಿಶ್ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿದ ಐವರು ಕಾಮುಕರಿಗೆ ದೆಹಲಿ ಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ಸುದೀರ್ಘ ವಿಚಾರಣ ತೀನ್ ಹಜಾರಿ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ರಮೇಶ್ ಕುಮಾರ್ ಅವರು, ಆರೋಪಿಗಳಾದ ಮಹೇಂದರ್ ಅಲಿಯಾ ಗಾಂಜಾ(24), ಮೊಹ್ದ್ ರಾಜಾ(22), ರಾಜು(23), ಅರ್ಜುನ್(21) ಹಾಗೂ ರಾಜು ಚಕ್ಕಾಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಮೂವರು ಬಾಲಪರಾಧಿಗಳು ಸೇರಿದಂತೆ ಒಟ್ಟು ಒಂಬತ್ತು ಅಪರಾಧಿಗಳ ಪೈಕಿ ಓರ್ವ ಆರೋಪಿ ಶಾಮ್ ಲಾಲ್ ಕಳೆದ ವರ್ಷ ಫೆಬ್ರುವರಿಯಲ್ಲಿ ತಿಹಾರ್ ಜೈಲಿನಲ್ಲಿ ಮೃತಪಟ್ಟಿದ್ದ.
ವಿಚಾರಣೆ ವೇಳೆ ಇದೊಂದು ಘೋರ ಮತ್ತು ಹೀನ ಕೃತ್ಯವಾಗಿದೆ ಮತ್ತು ಘಟನೆಯಿಂದಾಗಿ ದೇಶದ ಗೌರವಕ್ಕೂ ಧಕ್ಕೆಯಾಗಿದೆ. ಹೀಗಾಗಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ನಿನ್ನೆ ವಾದಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆರೋಪಿಗಳ ಪರ ವಕೀಲ ದಿನೇಶ್ ಶರ್ಮಾ ಅವರು, ಆರೋಪಿಗಳು ಕೇವಲ 20 ವರ್ಷದವರಾಗಿದ್ದು, ಬಡವರಾಗಿದ್ದಾರೆ. ಹೀಗಾಗಿ ಗರಿಷ್ಠ 20 ವರ್ಷ ಜೈಲು ಶಿಕ್ಷೆ ಸಾಕು ಎಂದು ಮನವಿ ಮಾಡಿದ್ದರು.
ವಾದ ಪ್ರತಿವಾದ ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಮೇಶ್ ಕುಮಾರ್ ಅವರು ತೀರ್ಪನ್ನು ಕಾಯ್ದಿರಿಸಿದರು.
ಜನವರಿ 14 ,2014 ರಲ್ಲಿ ಈ ಒಂಬತ್ತು ಜನರ ಗ್ಯಾಂಗ್ ದೆಹಲಿಯ ರೇಲ್ವೆ ನಿಲ್ದಾಣದ ಬಳಿ ಡ್ಯಾನಿಶ್ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ದರೋಡೆ ಮಾಡಿದ್ದಲ್ಲದೇ ಆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.