ದೇಶ

ಭೂಗತ ಪಾತಕಿ ಛೋಟಾ ರಾಜನ್ ಹತ್ಯೆಗೆ ಸಂಚು: 4 ಬಂಧನ

Manjula VN

ನವದೆಹಲಿ: ರಾಜಧಾನಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಭೂಗತ ಪಾತಕಿ ಛೋಟಾ ರಾಜನ್ ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರನ್ನು ದೆಹಲಿ ಪೊಲೀಸರ ವಿಶೇಷ ತಂಡ ಶುಕ್ರವಾರ ಬಂಧನಕ್ಕೊಳಪಡಿಸಿದೆ.

ಛೋಟಾ ರಾಜನ್ ಹತ್ಯೆಗೆ ಗುಂಪೊಂದು ಸಂಚು ರೂಪಿಸಿದ್ದು, ಇದಕ್ಕಾಗಿ ದಾವೂದ್ ಭಂಟ ಛೋಟಾ ಶಕೀಲ್  ಗುತ್ತಿಗೆ ಹಂತಕನ್ನು ನಿಯೋಜಿಸಿದ್ದಾನೆಂದು ಹೇಳಲಾಗುತ್ತಿತ್ತು. ಇದರಂತೆ ಖಚಿತ ಮಾಹಿತಿ ಮೇರೆಗೆ ಹಂತಕರ ಭೇಟೆಗೆ ಇಳಿದಿದ್ದ ಪೊಲೀಸರು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ರೋಜನ್ ರಾಬಿನ್ ಸನ್, ಜುನೈದ್, ಮನೀಶ್ ಮತ್ತು ಯೂನುಸ್ ಎಂದು ಗುರ್ತಿಸಲಾಗಿದೆ. ಎಲ್ಲಾ ಆರೋಪಿಗಳನ್ನು ದೆಹಲಿ ಎನ್ ಸಿಆರ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧನಕ್ಕೊಳಗಾಗಿರುವ ಎಲ್ಲಾ ಆರೋಪಿಗಳು ದೂರವಾಣಿ ಮೂಲಕ ಛೋಟಾ ಶಕೀಲ್ ಜೊತೆ ಸಂಪರ್ಕದಲ್ಲಿದ್ದರು. ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಜೂನ್.3 ರಂದು ಬಂಧಿಸಿದ್ದರು, ಬಂಧಿತ ಆರೋಪಗಳನ್ನು 5 ದಿನಗಳವರೆಗೆ ವಿಚಾರಣೆ ನಡೆಸಲಾಗಿದ್ದು. ಇದೀಗ ಬಂಧಿತರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದುಬಂದಿದೆ.

2015ರ ನವೆಂಬರ್ ತಿಂಗಳಿನಲ್ಲಿ ಭೂಗತ ಪಾತಕಿ ಛೋಟಾ ರಾಜನ್ ನನ್ನು ಇಂಡೋನೇಷ್ಯಾದ ಬಾಲಿಯಲ್ಲಿ ಬಂಧಿಸಲಾಗಿತ್ತು. ಇದೀಗ ರಾಜನ್ ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಹೆಚ್ಚಿನ ಭದ್ರತೆಯೊಂದಿಗೆ ಇರಿಸಲಾಗಿದೆ.

SCROLL FOR NEXT