ಬಸ್ತಿ: ನೊಬೆಲ್ ಪುರಸ್ಕೃತೆ ಮದರ್ ತೆರೆಸಾ ವಿರುದ್ಧ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮದರ್ ತೆರಸಾ ಭಾರತವನ್ನು ಕ್ರೈಸ್ತ ಧರ್ಮಕ್ಕೆ ಪರಿವರ್ತಿಸುವ ಜಾಲದ ಒಂದು ಭಾಗವಾಗಿದ್ದರು ಎಂದು ಆರೋಪಿಸಿದ್ದಾರೆ.
ಬಸ್ತಿಯಲ್ಲಿ ನಡೆದ ರಾಮ ಕಥಾ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಈಶಾನ್ಯ ರಾಜ್ಯಗಳಾದ ಅರುಣಾಚಲಪ್ರದೇಶ, ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳಲ್ಲಿ ಮತಾಂತರದಿಂದ ಪ್ರತ್ಯೇಕತಾ ಚಳುವಳಿಗಳು ಪ್ರಾರಂಭವಾಗಿವೆ.
ಭಾರತದ ಈಶಾನ್ಯ ಭಾಗದಲ್ಲಿನ ಪರಿಸ್ಥಿತಿಯ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಒಮ್ಮೆ ಇಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ, ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
ಈ ಹಿಂದೆ ಕೂಡ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಕೂಡ ಮದರ್ ತೆರೆಸಾ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಮದರ್ ತೆರೆಸಾ ಅವರು ಬಡವರಿಗೆ ಸೇವೆ ನೀಡುವುದರ ಹಿಂದೆ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಉದ್ದೇಶವಿಟ್ಟುಕೊಂಡಿದ್ದರು ಎಂದು ಆರೋಸಿದ್ದರು. ಇದೀರ ಯೋಗಿ ಆದಿತ್ಯನಾಥ್ ಅವರು ನೀಡಿರುವ ಹೇಳಿಕೆ ಮತ್ತೆ ಹೊಸ ವಿವಾದ ಸೃಷ್ಟಿಸಿದಂತಾಗಿದೆ.