ನವದೆಹಲಿ: ದೆಹಲಿ ಆಡಳಿತರೂಢ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷ ಬೀದಿಬದಿಯ ಸಂಘಟನೆಯಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಶುಕ್ರವಾರ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೊಲೆಯಾದ ನವದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ (ಎನ್ ಡಿಎಂಸಿ) ಕಾನೂನು ಸಲಹೆಗಾರ ಎಂ.ಎಂ.ಖಾನ್ ಅವರ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಪ್ರಕರಣ ಸಂಬಂಧ ಬಿಜೆಪಿ ಶಾಸಕ ಮಹೇಶ್ ಗಿರಿ ಮತ್ತು ಎನ್ ಡಿಎಂಸಿ ಉಪಾಧ್ಯಕ್ಷ ಕನ್ವರ್ ಸಿಂಗ್ ತನ್ವರ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಆಪ್ ನಾಯಕರು ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಯುತ್ತಿಲ್ಲ. ಪ್ರಕರಣದಲ್ಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಪಾತ್ರಕೂಡ ಇದೆ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಕಿರಣ್ ರಿಜಿಜು ಅವರು, ಎಂ.ಎಂ.ಖಾನ್ ಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನಗಳನ್ನು ಮಾಡಬಾರದು. ನಿಷ್ಪಕ್ಷಪಾತ ತನಿಖೆ ನಡೆಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡಿದರೆ ತನಿಖೆ ದುರ್ಬಲಗೊಳ್ಳುತ್ತದೆ. ನಾಯಕರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕಿದೆ. ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಆಪ್ ನಾಯಕರು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ಆಪ್ ಪಕ್ಷ ಬೀದಿಬದಿಯ ಸಂಘಟನೆಗಳಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂಬುದನ್ನು ನಾಯಕರು ಅರಿಯುವ ಅವಶ್ಯಕವಿದೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ದೆಹಲಿ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆಂಬ ನಂಬಿಕೆ ಕೇಂದ್ರಕ್ಕಿದೆ. ಇದರಂತೆ ಪ್ರಕರಣದ ತನಿಖೆ ಕೂಡ ಸಾಕಷ್ಟು ಪ್ರಗತಿ ಕಾಣುತ್ತಿದೆ. ಶೀಘ್ರದಲ್ಲೇ ಸತ್ಯಾಂಶ ಬಹಿರಂಗಗೊಳ್ಳಲಿದೆ ಎಂದಿದ್ದಾರೆ.