ನವದೆಹಲಿ; ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲು ವೈದ್ಯ ತಂಡವನ್ನು ನೇಮಿಸುವಂತೆ ದೆಹಲಿ ಪೊಲೀಸರರು ಆರೋಗ್ಯ ಸೇವಾ ಡೈರೆಕ್ಟರ್ ಜನರಲ್ ಗೆ ಪತ್ರವೊಂದನ್ನು ಬರೆದಿರುವುದಾಗಿ ಬುಧವಾರ ತಿಳಿದುಬಂದಿದೆ.
ಈ ಕುರಿತಂತೆ ಆರೋಗ್ಯ ಸೇವಾ ಡೈರೆಕ್ಟರ್ ಜನರಲ್ ಗೆ ಪತ್ರ ಬರೆದಿರುವ ದೆಹಲಿ ಪೊಲೀಸರು, ಸುನಂದಾ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ತನಿಖೆಯನ್ನು ನಡೆಸುತ್ತಿದೆ. ಆದರೆ, ಏಮ್ಸ್ ವೈದ್ಯಕೀಯ ಸಂಸ್ಥೆ ಸಲ್ಲಿಸಿರುವ ವರದಿಯನ್ವಯ ಅಂತಿಮ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ವಿಫಲವಾಗಿದೆ ಎಂದು ಹೇಳಿಕೊಂಡಿದೆ.
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಈ ಹಿಂದೆ ಏಮ್ಸ್ ಸಂಸ್ಥೆಗೆ ಪತ್ರವೊಂದನ್ನು ಬರೆದಿದ್ದು, ಪ್ರಕರಣದಲ್ಲಿ ಸ್ಪಷ್ಟತೆ ಹಾಗೂ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಹೇಳಲಾಗಿತ್ತು. ಆದರೆ, ಈ ಬಗ್ಗೆ ಏಮ್ಸ್ ಈ ವರೆಗೂ ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ.
ಸುನಂದಾ ನಿಗೂಢ ಸಾವು ಪ್ರಕರಣ ಸಂಬಂಧ ದೆಹಲಿ ಪೊಲೀಸರು ಹಾಗೂ ಏಮ್ಸ್ ವೈದ್ಯಕೀಯ ಸಂಸ್ಥೆ ಇಬ್ಬರು ನೀಡುತ್ತಿರುವ ವರದಿಯಲ್ಲಿ ಸಾಕಷ್ಟು ವ್ಯತ್ಯಾಸಗಳು ಬರುತ್ತಿದೆ. ಹೀಗಾಗಿ ಶಶಿ ತರೂರ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸುವಂತೆ ಕೋರಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಇದರಂತೆ ಈ ಹಿಂದೆ ದೆಹಲಿ ಪೊಲೀಸ್ ಆಯುಕ್ತರಾಗಿದ್ದ ಬಿ.ಎಸ್. ಬಸ್ಸಿ ಅವರು ತಾವು ನಿವೃತ್ತಿಗೊಳ್ಳುವುದಕ್ಕೂ ಎರಡು ದಿನಗಳ ಹಿಂದೆ ಸುನಂದಾ ಪ್ರಕರಣವನ್ನು ಪರಿಶೀಲಿಸಿದ್ದರು. ಈ ವೇಳೆ ಮತ್ತೊಂದು ವೈದ್ಯಕೀಯ ತಂಡವನ್ನು ನೇಮಿಸುವುದಾಗಿ ನಿರ್ಧಾರವನ್ನು ಕೈಗೊಂಡಿದ್ದರು ಎಂದು ಹೇಳಲಾಗುತ್ತಿದೆ.