ಚಂಡೀಘರ್: ಹಿಮಾಚಲ ಪ್ರದೇಶದ ಚಂಬಾ ಬಳಿ ರಾವಿ ನದಿಯ ನೀರಿನ ಪ್ರಮಾಣದಲ್ಲಿ ಅನಿರೀಕ್ಷಿತ ಏರಿಕೆ ಕಂಡಿದ್ದರಿಂದ ಪಠಾನ್ ಕೋಟ್ ವಾಯುನೆಲೆಯ ಇಬ್ಬರು ಐ ಎ ಎಫ್ ಸೈನಿಕರು ಶನಿವಾರ ಸಂಜೆ ಕೊಚ್ಚಿಹೋಗಿದ್ದಾರೆ. ಈ ಘಟನೆಯಲ್ಲಿ ಮೂವರು ಸೈನಿಕರು ಕೂಡ ಗಾಯಗೊಂಡಿದ್ದಾರೆ.
ಕೊಚ್ಚಿಹೋದ ಸೈನಿಕರನ್ನು ಮೀರತ್ ನ ೨೬ ವರ್ಷದ ನಿತೇಶ್ ಮಿಶ್ರಾ ಮತ್ತು ಜೈಪುರದ ೩೦ ವರ್ಷದ ಶಕ್ತಿ ಸಿಂಗ್ ಎಂದು ಗುರುತಿಸಲಾಗಿದ್ದು, ಭಾನುವಾರ ಬೆಳಗ್ಗೆ ಅವರ ದೇಶವನ್ನು ಪತ್ತೆಹಚ್ಚಲಾಗಿದ್ದು, ಶವಪರೀಕ್ಷೆಗೆ ಕಳುಹಿಸಲಾಗಿದೆ. ಶೀಘ್ರದಲ್ಲಿ ದೇಹವನ್ನು ಅವರ ಕುಟುಂಬಗಳ ವಶಕ್ಕೆ ಕೊಡಲಾಗುವುದು ಎಂದು ತಿಳಿದುಬಂದಿದೆ.
ಇನ್ನೂ ಮೂವರು ಈಜಾಡಿ ಪ್ರಾಣ ಉಳಿಸಿಕೊಂಡಿದ್ದು, ಅವರಿಗೆ ಪ್ರಾದೇಶಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರುಗಳು ನಾವಲ್ ಪಾಂಡೆ, ನವೀನ್ ಶರ್ಮಾ ಮತ್ತು ಗಜೇಂದರ್ ಸಿಂಗ್ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೈಡ್ರೋ ಇಂಧನ ಕಾರ್ಪೊರೇಶನ್(ಎನ್ ಎಚ್ ಪಿ ಸಿ) ಚಮೇರಾ ಅಣೆಕಟ್ಟಿನಿಂದ ಅನಿರಿಕ್ಷಿತವಾಗಿ ನೀರು ಬಿಡುಗಡೆ ಮಾಡಿದ್ದರಿಂದ ನದಿಯ ನೀರಿನ ಮಟ್ಟ ಏರಿ ಈ ದುರ್ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ.
ಎನ್ ಎಚ್ ಪಿ ಸಿ ಯ ಸೈರನ್ ಈ ಸೈನಿಕರಿಗೆ ಕೇಳಿಸಲಿಲ್ಲ ಎಂದು ದೂರಲಾಗಿದ್ದು, ಈ ಘಟನೆಯ ತನಿಖೆಗೆ ಆದೇಶಿಸಲಾಗಿದೆ.
"ಈ ಐದು ಜನ ಸೈನಿಕರು ರಜೆಯಲ್ಲಿದ್ದರು ಮತ್ತು ಅವರು ತಮ್ಮ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಾಗ, ಅನಿರೀಕ್ಷಿತವಾಗಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಇಬ್ಬರು ಕೊಚ್ಚಿ ಹೋಗಿದ್ದಾರೆ" ಎಂದು ಚಂಬಾದ ಸಹ ನಿರ್ದೇಶಕ ಸುದೇಶ್ ಮೊಖ್ತಾ ಹೇಳಿದ್ದಾರೆ.