ಚಂಡೀಗಢ: ಹರ್ಯಾಣದಲ್ಲಿ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಜಾಟ್ ಸಮುದಾಯದವರು ಸಾವನ್ನಪ್ಪಿದ ಪ್ರತಿಭಟನಾಕಾರರಿಗೆ ಹುತಾತ್ಮರ ಗೌರವ ನೀಡಬೇಕೆಂಬ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಇಂಡಿಯಾ ಟುಡೆ ವರದಿ ಪ್ರಕಾರ, ಮೃತಪಟ್ಟ ಪ್ರತಿಭಟನಾ ನಿರತರನ್ನು ಹುತಾತ್ಮರೆಂದು ಘೋಷಿಸಬೇಕು ಒಂದು ವೇಳೆ ಬೇಡಿಕೆ ಇಡೇರದೇ ಇದ್ದರೆ, ಮತ್ತೆ ಪ್ರತಿಭಟನೆ ನಡೆಸುವುದಾಗಿ ಜಾಟ್ ಸಮುದಾಯ ಎಚ್ಚರಿಕೆ ನೀಡಿದೆ. ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂಬ ಮತ್ತೊಂದು ಬೇಡಿಕೆಯನ್ನು ಜಾಟ್ ಸಮುದಾಯ ಮುಂದಿಟ್ಟಿದೆ.
ಜಾಟ್ ಸಮುದಾಯದ ಬೇಡಿಕೆಗಳಿಗೆ ನಕಾರಾತ್ಮಕವಾಗಿ ಸ್ಪಂದಿಸುವ ಸೂಚನೆ ನೀಡಿರುವ ಹರ್ಯಾಣ ಸರ್ಕಾರ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಿರುವುದಾಗಿ ತಿಳಿಸಿದೆ. ಇದೇ ವೇಳೆ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡುವ ಕಾಯ್ದೆಯ ಕರಡನ್ನು ರಚಿಸುವುದಕ್ಕೆ ಸಂಬಂಧಿಸಿದಂತೆ ಹರ್ಯಾಣ ಸರ್ಕಾರ ಮಾ.12 ರಂದು ಸರ್ವಪಕ್ಷ ಸಭೆ ಕರೆದಿದೆ.