ಮೈಸೂರು ಅರಮನೆ ಆವರಣದಲ್ಲಿ ಸ್ವಚ್ಛತೆ (ಸಂಗ್ರಹ ಚಿತ್ರ)
ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರ ನಡೆಸಿದ್ದ ಸ್ವಚ್ಛ್ ಸರ್ವೇಕ್ಷಣ್ ನ ಸಮೀಕ್ಷೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು, ದೇಶದ ಮೊದಲ ಯೋಜಿತ ರಾಜಧಾನಿ ನಗರವಾಗಿರುವ ಚಂಡೀಗಢವನ್ನು ಹಿಂದಿಕ್ಕಿ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿತ್ತು.
ಚಂಡೀಗಢ ದೇಶದ ಮೊದಲ ಯೋಜಿತ ನಗರವಾದರೂ ಸ್ವಚ್ಛ ನಗರಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆಯದೇ ಇರುವುದಕ್ಕೆ ತ್ಯಾಜ್ಯ ವಿಂಗಡನೆ, ವಿಲೇವಾರಿ ಸಮರ್ಪಕವಾಗಿಲ್ಲದೇ ಇರುವುದೇ ಪ್ರಮುಖ ಕಾರಣವಾಗಿದೆ.
ಮೈಸೂರು ನಗರ ಚಂಡೀಗಢಕ್ಕಿಂತ ಉತ್ತಮ ರೀತಿಯಲ್ಲಿ ತ್ಯಾಜ್ಯ ವಿಂಗಡನೆ ಹಾಗೂ ವಿಲೇವಾರಿ ಮಾಡುತ್ತಿದ್ದು, ಮೈಸೂರು ಚಂಡಿಗಢಕ್ಕಿಂತ ಸ್ವಚ್ಛ ನಗರವಾಗುವುದಕ್ಕೆ ಇದೇ ಕಾರಣವಾಗಿದೆ. ಚಂಡೀಗಢದಲ್ಲಿ ಪ್ರತಿದಿನ 25 ಟ್ರಕ್ ಲೋಡ್ ನಷ್ಟು ಘನ ತಾಜ್ಯ ಉತ್ಪಾದನೆಯಾಗುತ್ತದೆ. ನಗರದ 1 .05 ಮಿಲಿಯನ್ ಜನರಿಂದ ದಿನಂಪ್ರತಿ 370 ಟನ್ ಗಳಷ್ಟು ಘನ ತಾಜ್ಯ ಉತ್ಪಾದನೆಯಾಗುತ್ತದೆ. ತ್ಯಾಜ್ಯ ವಿಂಗಡನೆ ಹಾಗೂ ವಿಲೇವಾರಿಗಾಗಿ ಚಂಡೀಗಢ ಪುರಸಭೆ ಪ್ರತಿ 2 .65 ಕಿ.ಮೀ ರಸ್ತೆಗೆ ಒಬ್ಬರಂತೆ 4 ,085 ಸಿಬ್ಬಂದಿಗಳನ್ನು ನೇಮಕ ಮಾಡಿದೆ.
0.89 ಮಿಲಿಯನ್ ಜನಸಂಖ್ಯೆ ಹೊಂದಿರುವ ನಗರ ಮೈಸೂರು ಪ್ರತಿ 1 .37 ಕಿ.ಮೀ ರಸ್ತೆಗೆ ಒಬ್ಬರಂತೆ ಸಿಬ್ಬಂದಿಗಳನ್ನು ನೇಮಕ ಮಾಡಿದ್ದು 410 ಟನ್ ಅಥವಾ 27 ಟ್ರಕ್ ಲೋಡ್ ನಷ್ಟು(ಚಂಡೀಗಢಕ್ಕಿಂತ ಹೆಚ್ಚು) ಘನ ತಾಜ್ಯವನ್ನು ನಿರ್ವಹಣೆ ಮಾಡುತ್ತಿದೆ. ಮೈಸೂರಿನಲ್ಲಿ ಒಬ್ಬ ವ್ಯಕ್ತಿಯಿಂದ ದಿನಕ್ಕೆ ೦.45 ಕೆ.ಜಿ ತ್ಯಾಜ್ಯ ಉತ್ಪಾದನೆಯಾದರೆ ಚಂಡೀಗಢದಲ್ಲಿ 0 .35 ಕೆಜಿ ಯಷ್ಟಿದೆ. ಚಂಡೀಗಢದ ಶೇ.95 ರಷ್ಟು ಜನರಿಗೆ ಒಳಚರಂಡಿ ವ್ಯವಸ್ಥೆಯ ಸೌಲಭ್ಯವಿದ್ದು ತೆರೆದ ಒಳಚರಂಡಿಗಳು, ಕಿರಿದಾದ ರಸ್ತೆಗಳು, ಮಾರುಕಟ್ಟೆಗಳು ಕಂಡುಬರುವುದಿಲ್ಲ, ಚಂಡಿಗಢದಲ್ಲಿ ಇಷ್ಟೆಲ್ಲಾ ಸೌಲಭ್ಯವಿದೆ, ಹಾಗಿದ್ದರೂ ಮೈಸೂರು ನಗರ ಸಮರ್ಪಕವಾದ ತ್ಯಾಜ್ಯ ವಿಂಗಡನೆ ಹಾಗೂ ವಿಲೇವಾರಿಯಿಂದಾಗಿ ದೇಶದ ನಂ.1 ಸ್ವಚ್ಛ ನಗರ ಸ್ಥಾನ ಪಡೆದಿದೆ. ಇನ್ನು ಮೈಸೂರು ಸ್ವಚ್ಛ ನಗರವಾಗುವುದಕ್ಕೆ 'ಲೆಟ್ಸ್ ಡು ಇಟ್ ಮೈಸೂರು' ಎಂಬ ಎನ್ ಜಿ ಒ ಮೂಲಕ ಶ್ರಮಿಸುತ್ತಿರುವ ನಾಗರಿಕರದ್ದೂ ಕೊಡುಗೆ ಇದೆ. ಚಂಡೀಗಢದಲ್ಲಿಯೂ ಇಂತಹ ಎನ್ ಜಿ ಒ ಗಳಿವೆಯಾದರು ಅವು ಮೈಸೂರಿನಂತೆ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ತೊಡಗುವುದಿಲ್ಲ.
ಚಂಡೀಗಢ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವುದಕ್ಕೆ ಮೈಸೂರಿನಂತೆ ಸಂಗ್ರಹಣೆ ಹಂತದಲ್ಲೇ ತ್ಯಾಜ್ಯ ವಿಂಗಡನೆ ಮಾಡದೇ ಇರುವುದೂ ಒಂದು ಕಾರಣವಾಗಿದೆ. ಮೈಸೂರು ನಗರದಲ್ಲಿರುವ ತ್ಯಾಜ್ಯ ವಿಂಗಡನೆಯ 9 ಘಟಕಗಳು ಗುಣಮಟ್ಟದ ಗೊಬ್ಬರ ಉತ್ಪಾದನೆಯತ್ತ ಗಮನಹರಿಸುತ್ತವೆ. ಇಲ್ಲಿಂದ ಉತ್ಪಾದನೆಯಾಗುವ ಗೊಬ್ಬರ ನಗರಸಭೆಗೆ ಆದಾಯವನ್ನೂ ತಂದುಕೊಡುತ್ತವೆ. ಈಗ ಚಂಡೀಗಢವೂ ಸಹ ಸಂಗ್ರಹಣೆ ಹಂತದಲ್ಲೇ ತ್ಯಾಜ್ಯವನ್ನು ವಿಂಗಡಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದ್ದು, ಸಾವಯವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡಲು ಚಿಂತನೆ ನಡೆಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos