ಚಿತ್ತೂರು: ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಪರಿಣಾಮ ಮೂವರು ತೆಲುಗು ದೇಶಂ ಪಕ್ಷದ ನಾಯಕರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಮೃತರನ್ನು ವೆಂಕಟಮುನಿ ರೆಡ್ಡಿ, ಬಾಲಕೃಷ್ಣ ರೆಡ್ಡಿ, ಸುರೇಶ್ ಎಂದು ಗುರ್ತಿಸಲಾಗಿದ್ದು, ಮೂವರು ಬೊಲೆರೋ ವಾಹನವೊಂದರಲ್ಲಿ ಕಡಪ ಜಿಲ್ಲೆಯ ರಾಜಂಪೇಟೆಯಲ್ಲಿ ಮದುವೆ ಸಮಾರಂಭವೊಂದಕ್ಕೆ ಹೋಗಿ ಹಿಂತಿರುಗಿ ಬರುತ್ತಿದ್ದರು.
ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಹೋಗುತ್ತಿದ್ದ ವೇಳೆ ವೇಗದಲ್ಲಿ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬೊಲೆರೋ ವಾಹನದಲ್ಲಿದ್ದ ಮೂವರು ಟಿಡಿಪಿ ನಾಯಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಮತ್ತೊಬ್ಬರು ಗೋಪಾಲ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಗೋಪಾಲ್ ಅವರ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಶವಪರೀಕ್ಷೆಗಾಗಿ ಚಿತ್ತೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.