ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಕುರಿತಂತೆ ಈ ವರೆಗಿನ ತನಿಖಾ ಬೆಳವಣಿಗೆಯ ವರದಿಯನ್ನು ನೀಡುವಂತೆ ಭಾರತದ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಪಾಕಿಸ್ತಾನದ ಬಳಿ ಕೇಳಿದೆ ಎಂದು ತಿಳಿದುಬಂದಿದೆ.
ಪಠಾಣ್ ಕೋಟ್ ದಾಳಿ ಕುರಿತಂತೆ ತನಿಖೆ ನಡೆಸುತ್ತಿರುವ ಪಾಕಿಸ್ತಾನ ತನಿಖಾ ತಂಡ ಇಂದು ದೆಹಲಿಗೆ ಭೇಟಿ ನೀಡಿದ್ದು, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಸಭೆಯಲ್ಲಿ ಎರಡೂ ದೇಶದ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಮಾತುಕತೆ ವೇಳೆ ಭಾರತವು ಪ್ರಕರಣ ಸಂಬಂಧದ ಈವರೆಗಿನ ಬೆಳವಣಿಗೆಯ ವರದಿಯನ್ನು ಕೇಳಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ದಾಳಿ ಸಂಬಂಧ ಭಾರತ ಈಗಾಗಲೇ ಪಾಕಿಸ್ತಾನ ಅಧಿಕಾರಿಗಳಿಗೆ ಸಲ್ಲಿಸಲಾಗಿರುವ ಉಗ್ರ ಮಸೂದ್ ಅಜರ್ ನ ಧ್ವನಿ ಮುದ್ರಿಕೆ ಸಂಬಂಧ ಯಾವ ಕ್ರಮ ಕೈಗೊಂಡಿದೆ ಎಂಬುದರ ವರದಿಯನ್ನು ಕೇಳಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಪಾಕಿಸ್ತಾನ ಅಧಿಕಾರಿಗಳಿಗೆ ಪ್ರಕರಣ ಸಂಬಂಧ ಎಲ್ಲಾ ರೀತಿಯ ಸಾಕ್ಷ್ಯಾಧಾರಗಳನ್ನು ಒದಗಿಸಲು ನಿರ್ಧಾರ ಕೈಗೊಂಡಿರುವ ಭಾರತದ ಅಧಿಕಾರಿಗಳು, ಇದರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳು ಅಥವಾ ಬಿಎಸ್ಎಫ್ ಗಳ ಕುರಿತ ಮಾಹಿತಿಗಳನ್ನು ಮಾತ್ರ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.