ಘಾಜಿಯಾಬಾದ್: ಟಿ-20 ವಿಶ್ವಕಪ್ ಭಾರತ-ಆಸ್ಟ್ರೇಲಿಯಾ ನಡುವಿನ ಸಮರದ ವೇಳೆ ಸ್ಥಳೀಯರು ಮಾಡಿದ ಸಂಭ್ರಮಾಚರಣೆಯಿಂದಾಗಿ ಕುಟುಂಬವೊಂದು ದುಬಾರಿ ಬೆಲೆ ತೆರಬೇಕಾದ ಸಂದರ್ಭ ಎದುರಾಗಿದೆ.
ಭಾನುವಾರ ನಡೆದ ಟಿ-20 ವಿಶ್ವಕಪ್ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ಸಾಕಷ್ಟು ರೋಚಕತೆಯನ್ನುಂಟು ಮಾಡಿತ್ತು. ಭಾರತ ಗೆಲುವಿನ ದಡ ಸೇರುತ್ತಿದ್ದಂತೆ ಜನತೆ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಇದರಂತೆ ಘಾಜಿಯಾಬಾದ್ ನಲ್ಲಿರುವ ಸ್ಥಳೀಯರು ಕೂಡ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡುತ್ತಿತ್ತು. ಆದರೆ, ಇದೇ ಸಂಭ್ರಮಾಚರಣೆ ಇದೀಗ ಕುಟುಂಬವೊಂದು ದುಬಾರಿ ಬೆಲೆ ತೆರುವಂತಾಗಿದೆ.
ಸುನೀಲ್ ಕುಮಾರ್ ಎಂಬುವವರು ಘಾಜಿಯಾಬಾದ್ ನ ರಾಜ್ ನಗರದಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಇದರಂತೆ ಮನೆಯ ಸಾಮಾಗ್ರಿಗಳನ್ನು ಟ್ರಕ್ ಮೂಲಕ ಹೊಸ ಮನೆಗೆ ಸಾಗಿಸುತ್ತಿದ್ದರು. ಸಾಮಾಗ್ರಿಗಳನ್ನು ಟ್ರಕ್ ಗೆ ಸುಲಭವಾಗಿ ಸಾಗಿಸುವ ಸಲುವಾಗಿ ಟ್ರಕ್ ಚಾಲಕ ವಾಹನವನ್ನು ಮನೆಯ ಪಕ್ಕದಲ್ಲೇ ನಿಲ್ಲಿಸಿದ್ದ.
ಟಿ-20 ಪಂದ್ಯಾವಳಿಯಲ್ಲಿ ಭಾರತ ಗೆಲವು ಸಾಧಿಸುತ್ತಿದ್ದಂತೆ ಅಲ್ಲಿನ ಸ್ಥಳೀಯರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಪಟಾಕಿಯ ಕಿಡಿಗಳು ಟ್ರಕ್ ನಲ್ಲಿರಿಸಲಾಗಿದ್ದ ಹಾಸಿಗೆಯ ಮೇಲೆ ಬಿದ್ದಿದೆ. ಇದರಿಂದಾಗಿ ಕ್ಷಣಾರ್ಧದಲ್ಲೇ ಬೆಂಕಿ ಟ್ರಕ್ ಸುತ್ತಲೂ ಆವರಿಸಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ಮಾಡಿದ್ದರಾದರೂ, ಟ್ರಕ್ ನಲ್ಲಿದ್ದ ಸಾಮಾಗ್ರಿಗಳೆಲ್ಲವೂ ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.