ಗಯಾ: ಕಳೆದ ವಾರ ಗಯಾದಲ್ಲಿ ತನ್ನ ಎಸ್ ಯುವಿ ಕಾರು ಓವರ್ಟೇಕ್ ಮಾಡಿದ ಯುವಕನನ್ನು ತಾನೇ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಜೆಡಿಯು ಎಂಎಲ್ ಸಿ ಮನೋರಮಾ ಪುತ್ರ ರಾಕಿ ಯಾದವ್ ತಪ್ಪೊಪ್ಪಿಕೊಂಡಿರುವುದಾಗಿ ಶನಿವಾರ ಪೊಲೀಸ್ ಮೂಲಗಳು ತಿಳಿಸಿವೆ,
ಪ್ರಕರಣದ ವಿಧಿವಿಜ್ಞಾನ ವರದಿಯಲ್ಲಿ ರಾಕಿ ಯಾದವ್ ಗನ್ನಿಂದ ಹಾರಿದ ಬುಲೆಟ್ನಿಂದ ಆದಿತ್ಯ ಸಚ್ದೇವ್ ಸಾವು ಸಂಭವಿಸಿದೆ ಎಂಬುದು ಬಹಿರಂಗಗೊಂಡಿದ್ದು, ತಾನೇ ಗುಂಡು ಹಾರಿಸಿ ಸಚ್ದೇವ್ ಕೊಲೆ ಮಾಡಿರುವುದಾಗಿ ರಾಕಿ ಯಾದವ್ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ನಾನು ಯಾವುದೇ ರೀತಿಯ ಗುಂಡಿನ ದಾಳಿ ನಡೆಸಿಲ್ಲ ಎಂದು ಹೇಳುತ್ತಿದ್ದ ರಾಕಿ ಯಾದವ್ ಇಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ,
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಗಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗರಿಮಾ ಮಲ್ಲಿಕ್ ಅವರು, ಜೆಡಿಯು ನಾಯಕಿಯ ಪುತ್ರ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಘಟನೆಯಲ್ಲಿ ಹಲವರ ಕೈವಾಡವಿದೆ. ತನಿಖೆಯ ನಂತರ ಎಲ್ಲವೂ ಸ್ಪಷ್ಟವಾಗಿ ತಿಳಿಯಲಿ ಎಂದು ಹೇಳಿದ್ದಾರೆ.
ವ್ಯಾಪಾರಿಯೊಬ್ಬರ ಪುತ್ರ ಆದಿತ್ಯ ಸಚ್ದೇವ್ ಹಾಗೂ ಸ್ನೆಹಿತರನ್ನು ಒಳಗೊಂಡ ಸ್ವಿಪ್ಟ್ ಕಾರು ಶಾಸಕಿಯ ಪುತ್ರ ರಾಕಿಯ ಎಸ್ಯುವಿ ಕಾರನ್ನು ಓವರ್ ಟೇಕ್ ಮಾಡಿದ ಹಿನ್ನೆಲೆಯಲ್ಲಿ ಉಭಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಆವೇಶಕ್ಕೆ ಒಳಗಾದ ರಾಕಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಆದಿತ್ಯಾಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.