ದೇಶ

ಕೇವಲ 11 ರು.ಗೆ ಪಾಪ ವಿಮೋಚನೆ!

Srinivasamurthy VN

ಉದಯಪುರ: ಮನುಷ್ಯ ತನ್ನ ಜೀವನದಲ್ಲಿ ತಿಳಿದೋ ತಿಳಿಯದೋ ಮಾಡಿದ ತಪ್ಪುಗಳ ಪ್ರಾಯಶ್ಚಿತ್ತಗಾಗಿ ದೇಶದಲ್ಲಿ ಖ್ಯಾತ ದೇವಾಲಗಳಿಗೆಲ್ಲಾ ಅಲೆದು ಹರಕೆ ಕಟ್ಟು ಪೂಜೆ ಮಾಡಿದರೆ, ಇಲ್ಲೊಂದು ದೇಗುಲ ಪಾಪ ವಿಮೋಚನೆ ಮಾಡುವುದಷ್ಟೇ ಅಲ್ಲದೇ ಪಾಪ ವಿಮೋಚನೆಯಾದ ಕುರಿತು ಪ್ರಮಾಣ ಪತ್ರ ಕೂಡ ಕೊಡುತ್ತದೆ.

ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪ ವಿಮೋಚನೆಯಾಗುತ್ತದೆ ಎಂಬುದು ಹಿಂದೂ ಯಾತ್ರಾರ್ಥಿಗಳ ಪರಂಪರಾಗತ ನಂಬಿಕೆ. ಆದರೆ ಈ ತೃಪ್ತಿ ಸಂಪೂರ್ಣವಾಗಿ  ಮಾನಸಿಕವಾದದ್ದಾಗಿದ್ದು, ಅದು ಹೊರ ಪ್ರಪಂಚಕ್ಕೆ ಗೋಚರವಾಗುವಂತಹುದಲ್ಲ. ಆದರೆ ರಾಜಸ್ಥಾನದ ಶಿವ ದೇವಾಲಯವೊಂದು ಈ ವಿಚಾರದಲ್ಲಿ ಸಂಪೂರ್ಣ ಭಿನ್ನವಾಗಿದ್ದು, ಇಲ್ಲಿ ಪಾಪ  ವಿಚೋನೆ ಕುರಿತು ಪ್ರಮಾಣ ಪತ್ರ ಕೂಡ ನೀಡಲಾಗುತ್ತದೆ. ರಾಜಸ್ತಾನದ ಪ್ರತಾಪ್ ಗಾರ್ಗ್ ಜಿಲ್ಲೆಯಲ್ಲಿರುವ ಗೌತಮೇಶ್ವರ ಮಹಾದೇವ ದೇವಾಲಯದ ಪವಿತ್ರ ಜಲದಲ್ಲಿ ಸ್ನಾನ  ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತವೆಯಂತೆ. ಇದಕ್ಕೆ ಸ್ವಯಂ ದೇಗುಲದ ಆಡಳಿತ ಮಂಡಳಿಯೇ ಪಾಪ ವಿಮೋಚನೆ ಕುರಿತಂತೆ ಪ್ರಮಾಣ ಪತ್ರ ನೀಡುತ್ತಿದೆ.

ಅರೆ ಇದು ಸಿನಿಮಾ ದೃಶ್ಯವಲ್ಲ ನಿಜ ಘಟನೆ. ಇಲ್ಲಿನ ಪವಿತ್ರ  ಪಾಪಮೋಚನ ತೀರ್ಥ ಮಂದಾಕಿನಿ ಕುಂಡದಲ್ಲಿ ಸ್ನಾನ ಮಾಡಿದ ಬಳಿಕ ದೇಗುಲದ ಆಡಳಿತ ಮಂಡಳಿ ಪ್ರಮಾಣಪತ್ರ ನೀಡಿದ್ದರ  ದಾಖಲಾತಿ ಇದೆ. ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ನೀಡಲಾದ ಪ್ರಮಾಣ ಪತ್ರಗಳ ದಾಖಲೆ ಕೂಡ ಇಲ್ಲಿದೆ. ಇಲ್ಲಿ ಪ್ರಮಾಣ ಪತ್ರಕ್ಕೆ 1 ರುಪಾಯಿ ಶುಲ್ಕ, ದೋಷ ನಿವಾರಣೆಗಾಗಿ 10 ರುಪಾಯಿ  ಶುಲ್ಕ ಪಡೆಯಲಾಗುತ್ತದೆ. ಅಮೀನತ್ ಕಚ್ಛಾರಿ ಎಂಬ ಅರ್ಚಕರ ಸಮೂಹವೊಂದು ಈ ಪ್ರಮಾಣಪತ್ರವನ್ನು ನೀಡುತ್ತದೆಯಂತೆ. ಇನ್ನು ಪ್ರಸ್ತುತ ತಿಂಗಳಲ್ಲಿ ಅಂದರೆ ಮೇ ತಿಂಗಳಲ್ಲಿ ಕೇವಲ 3  ಪಾಪ ವಿಮೋಚನಾ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ.

ದೇಗುಲದ ಐತಿಹ್ಯವೇನು?
ಸಾವಿರಾರು ವರ್ಷಗಳ ಹಿಂದೆ ಗೌತಮ ಮಹರ್ಷಿಗಳು ಇಲ್ಲಿಗೆ ಬಂದು ಪವಿತ್ರ ಸ್ನಾನ ಮಾಡಿದ್ದರು. ತಮ್ಮಿಂದ ಪ್ರಾಣಿಯೊಂದರ ಹತ್ಯೆಯಾದಾಗ ಪಶ್ಚಾತ್ತಾಪ ಪಟ್ಟ ಗೌತಮ ಋಷಿಗಳು ಈ  ಕುಂಡದಲ್ಲಿ ಸ್ನಾನಮಾಡಿ ದೋಷ ಪರಿಹರಿಸಿಕೊಂಡರಂತೆ. ಈ ಕುರಿತು ಇಲ್ಲಿನ ಸ್ಥಳೀಯರಲ್ಲಿ ಅಪಾರ ನಂಬಿಕೆ ಇದ್ದು, ಕ್ರಮೇಣ ಇಲ್ಲಿ ಈ ಪರಂಪರೆ ಶುರುವಾಯಿತಂತೆ. ಹೆಚ್ಚಾಗಿ ರೈತರು  ಉಳುಮೆ ಮಾಡುವಾಗ ಕೀಟಗಳು, ಪ್ರಾಣಿಗಳು, ಮರಿಗಳು ಮೊಟ್ಟೆಗಳು, ಗಿಡಮರಗಳು ನಾಶಗೊಳ್ಳುವುದರಿಂದ ಉಂಟಾಗುವ ಪಾಪದ ಹೊರೆಯನ್ನು ಇಲ್ಲಿ ಮಿಂದು ಪರಿಹರಿಸಿಕೊಂಡು ನಿರ್ಮಲ  ಮನದೊಂದಿಗೆ ವಾಪಸಾಗುತ್ತಾರೆ ಎನ್ನುತ್ತಾರೆ ದೇವಾಲಯದ ಅರ್ಚಕರು.

SCROLL FOR NEXT