ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸತತ 2ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಶುಕ್ರವಾರ ಅಧಿಕೃತವಾಗಿ ಸರ್ಕಾರ ರಚನೆ ಮಾಡಲಿದೆ.
ಮಮತಾ ಬ್ಯಾನರ್ಜಿ ಅವರು ಇಂದು ಸತತ ಎರಡನೇ ಬಾರಿಗೆ ಪಶ್ಚಿಮ ಬಂಗಾಳ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಈಗಾಗಲೇ ಬೃಹತ್ ವೇದಿಕೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಟಿಎಂಸಿ ಮೂಲಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಈ ವರೆಗೂ ಆಗಿದರ ದೊಡ್ಡ ಮಟ್ಟದಲ್ಲಿ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಸುಮಾರು 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹೂಗ್ಲಿ ನದಿಯ ತಟದಲ್ಲಿ ಪ್ರಮಾಣ ವಚನಕ್ಕಾಗಿಯೇ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.
ಟೆನ್ನಿಸ್ ಕೋಟ್ ಅಂಗಳದ ಮಾದರಿಯಲ್ಲಿ ವೇದಿಕೆ ಸಿದ್ಧಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿವಿಐಪಿಗಳಿಗೆಂದೇ ವಿಶೇಷ ಎರ್ ಕಂಡೀಷನ್ ವ್ಯವಸ್ಥೆ ಮಾಡಿಸಲಾಗಿದೆ. ಹಸಿರು ನೆಲಹಾಸು ಹಾಗೂ ಬೃಹತ್ ನೀರಿನ ಫೌಂಟೇನ್ ಕೂಡ ನಿರ್ಮಾಣ ಮಾಡಲಾಗಿದ್ದು, ಇವು ಕಾರ್ಯಕ್ರಮಕ್ಕೆ ವೈಭವದ ಕಳೆ ಕಟ್ಟಲಿದೆ.
ಮೂಲಗಳ ಪ್ರಕಾರ ಮಮತಾ ಬ್ಯಾನರ್ಜಿ ಅವರೊಂದಿಗೆ ಅವರ ಸುಮಾರು 41 ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ 41 ಜನರ ಪೈಕಿ 18 ಮಂದಿ ಹೊಸ ಮುಖಗಳಾಗಿದ್ದು, ಇದೇ ಮೊದಲ ಬಾರಿಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಬೂತಾನ್ ಪ್ರಧಾನ ಮಂತ್ರಿ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಬಪೂಲ್ ಸುಪ್ರಿಯೋ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಜರಾಗುವ ಸಾಧ್ಯತೆ ಇದೆ.
ಕಾರ್ಯಕ್ರಮಕ್ಕೆ ಪ್ರತಿಪಕ್ಷಗಳ ವಿರೋಧ
ಇದೇ ವೇಳೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಜನರ ಭಾರಿ ಹಣವನ್ನು ವ್ಯಯಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಿ ಪ್ರಮಾಣ ವಚನ ಸ್ವೀಕಾರ ಮಾಡುವ ಅಗತ್ಯವಿದೆಯೇ ಎಂದು ಪ್ರತಿಪಕ್ಷಗಳು ಟೀಕಿಸಿವೆ.