ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರ 88 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಎಲ್ ಕೆ ಅಡ್ವಾಣಿಗೆ ಜನ್ಮದಿನದ ಶುಭಾಶಯ ಕೋರಿದ್ದು ಭಾರತ ಕಂಡ ಅತ್ಯಂತ ಮೇರು ನಾಯಕರಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ.
ಎಲ್ ಕೆ ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಜನ್ಮದಿನದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕನ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸಿದ್ದಾರೆ. ಇದಕ್ಕೂ ಮುನ್ನ ಟ್ವಿಟರ್ ಮೂಲಕ ಜನ್ಮದಿನದ ಶುಭಾಶಯ ತಿಳಿಸಿದ್ದ ಮೋದಿ, " ನಮ್ಮ ಸ್ಪೂರ್ತಿ, ಭಾರತ ಕಂಡ ಮೇರು ನಾಯಕ, ದಣಿವರಿಯದೇ ಭಾರತದ ಸೇವೆ ಮಾಡಿದ ಎಲ್ ಕೆ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಅಡ್ವಾಣಿ ಅವರಿಗೆ ಶುಭಾಶಯ ಕೋರಿದ್ದು, ಅಡ್ವಾಣಿ ಅವರನ್ನು ಮಾರ್ಗದರ್ಶಿ ದೀವಿಗೆ ಎಂದು ಬಣ್ಣಿಸಿದ್ದಾರೆ.