ನವದೆಹಲಿ: ದುಬಾರಿ ನೋಟಿನ ಮೇಲೆ ದಿಢೀರನೆ ಹೇರಲಾಗಿದ್ದ ನಿಷೇಧದಿಂದಾಗಿ ಕಂಗಾಲಾಗಿದ್ದ ಸಾರ್ವಜನಿಕರಿಗೆ ಇದೀಗ ಕೇಂದ್ರ ಸರ್ಕಾರ ಕೊಂಚ ನಿರಾಳವನ್ನು ನೀಡಿದ್ದು, ಎಟಿಎಂ ವಿತ್ ಡ್ರಾ ಮಿತಿ ಹಾಗೂ ಬ್ಯಾಂಕ್ ಕೌಂಟರ್ ಗಳ ಮಿತಿಯನ್ನು ಏರಿಕೆ ಮಾಡಿದೆ.
ರು.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿಕೆ ಮಾಡಿದ್ದರಿಂದಾಗಿ ಸಾರ್ವಜನಿಕರು ಸಂಕಷ್ಟದಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗಿತ್ತು. ಕೈಯಲ್ಲಿ ದುಡ್ಡಿದ್ದರೂ ಖರ್ಚು ಮಾಡಲಾಗದೆ ಪರದಾಡುವಂತಾಗಿತ್ತು. ದಿನಗಟ್ಟಲೆ ಸಾಲಿನಲ್ಲಿ ನಿಂತರೂ ನೋಟು ಬದಲಾವಣೆ ಮಾಡಿಕೊಳ್ಳಲಾಗದ ಕಾರಣ ಕೇಂದ್ರದ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಲು ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿರಿಯ ಸಚಿವರೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ವರದಿ ಪಡೆದುಕೊಂಡಿದ್ದರು. ಸಭೆ ಬಳಿಕ ಸಾರ್ವಜನಿಕರಿಗೆ ಕೊಂಚ ನಿರಾಳ ಎಂಬಂತಹ ನಿರ್ಧಾರವನ್ನು ಪ್ರಧಾನಿ ಮೋದಿಯವರು ತೆಗೆದುಕೊಂಡಿದ್ದು, ಎಟಿಎಂ ವಿತ್ ಡ್ರಾ ಮಿತಿಯನ್ನು 2000 ರಿಂದ 2,500ಕ್ಕೆ ಹಾಗೂ ಬ್ಯಾಂಕ್ ಕೌಂಟರ್ ಗಳ ಮಿತಿಯನ್ನು 4 ಸಾವಿರದಿಂದ 4,500ಕ್ಕೆ ಏರಿಕೆ ಮಾಡಿದ್ದಾರೆ.
ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆ
ನಿಷೇಧ ಹೇರಿಕೆಯಿಂದಾಗಿ ದೇಶದಲ್ಲಿನ ಮೂಲೆ ಮೂಲೆಯಲ್ಲಿರುವ ಬ್ಯಾಂಕ್ ಗಳು ಹಾಗೂ ಎಟಿಎಂ ಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದ್ದು, ಸಾಲಿನಲ್ಲಿ ನಿಂತು ಹಣವನ್ನು ಪಡೆದುಕೊಳ್ಳುವಲ್ಲಿ ಹಿರಿಯ ನಾಗರಿಕರು ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಗರ್ಭಿಣಿಯರು ಹಾಗೂ ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಕರೆಯನ್ನು ನೀಡಿದೆ. ಅಲ್ಲದೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣದ ಅಗತ್ಯತೆ ಹೆಚ್ಚಾಗಿರಲಿದ್ದು, ಬ್ಯಾಂಕ್ ಗಳು ಪ್ರತ್ಯೇಕವಾಗಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.