ನವದೆಹಲಿ: ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಸೇನಾಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಗಡಿಯಲ್ಲಿ ಪಾಕಿಸ್ತಾನ ಸಾಕಷ್ಟು ಬಾರಿ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಪ್ರತೀ ಬಾರಿ ಕದನ ವಿರಾಮ ಉಲ್ಲಂಘನೆಯಾದಾಗಲೂ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ. ಪರಿಣಾಮ ಪಾಕಿಸ್ತಾನ ಸೇನಾ ಬಂಕರ್ ಗಳು ನಾಶಗೊಂಡಿದ್ದು, ಭಾರೀ ನಷ್ಟ ಸಂಭವಿಸಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಗಡಿಯಲ್ಲಿ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, 7 ಸೈನಿಕರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿತ್ತು. ಇದಕ್ಕೆ ಪಾಕಿಸ್ತಾನ ಸರ್ಕಾರ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆ. ಪಾಕಿಸ್ತಾನ ಸೇನೆ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿತ್ತು. ಪಾಕಿಸ್ತಾನ ಸೇನಾ ದಾಳಿ ಹಾಗೂ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆ ಪ್ರತ್ಯುತ್ತರವನ್ನು ನೀಡುತ್ತಿತ್ತು ಎಂದು ಹೇಳಿದೆ.
ನಮ್ಮ ನಷ್ಟವನ್ನು ನಾವು ಮುಚ್ಚಿಡುವುದಿಲ್ಲ. ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ನಮ್ಮಲ್ಲೂ 10 ಸೈನಿಕರು ಹುತಾತ್ಮರಾಗಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಗಡಿಯಲ್ಲಿ ನಡೆದ ಕದನ ವಿರಾಮ ಉಲ್ಲಂಘನೆಯಲ್ಲಿ ನಾಲ್ಕು ಬಿಎಸ್ ಎಫ್ ಯೋಧರನ್ನು ಕಳೆದುಕೊಂಡಿದ್ದೇವೆ. ಪಾಕಿಸ್ತಾನ ಸಾಕಷ್ಟು ಸೈನಿಕರನ್ನು ಕಳೆದುಕೊಂಡಿದೆ. ಆದರೆ ಇದೇ ಮೊದಲ ಬಾರಿಗೆ ತನ್ನ ನಷ್ಟವನ್ನು ಒಪ್ಪಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.