ಆಗ್ರಾ: ಕಾಳಧನಿಕರು ಹಾಗೂ ನಕಲಿ ನೋಟುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೈಗೊಂಡಿದ್ದ ನೋಟು ನಿಷೇಧ ಕ್ರಮದಿಂದ ಭಾರತೀಯ ಬ್ಯಾಂಕುಗಳಿಗೆ ಅಪಾರ ಪ್ರಮಾಣದ ಠೇವಣಿಗಳು ಹರಿದು ಬರುತ್ತಿದ್ದು, ಈ ಠೇವಣಿ ಹಣದಿಂದಲೇ ಜನತೆಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ದೊರೆಯುವಂತೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಗ್ರಾದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನೋಟು ನಿಷೇಧದ ಬಳಿಕ ಭಾರತೀಯ ಬ್ಯಾಂಕುಗಳಿಗೆ ಸುಮಾರು 5ಲಕ್ಷ ಕೋಟಿಗೂ ಅಧಿಕ ಹಣ ಠೇವಣಿಯಾದಿ ಸಂಗ್ರಹವಾಗಿದ್ದು, ಈ ಹಣವನ್ನು ಚಲಾವಣೆಗೆ ತಂದು ಜನಸಾಮಾನ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರಕಿಸಿಕೊಡಲು ವ್ಯವಸ್ಥೆ ಕಲ್ಪಿಸುವುದಾಗಿ ಅಭಯ ನೀಡಿದ್ದಾರೆ.
2022ರ ಪ್ರತೀ ಕುಟುಂಬಕ್ಕೂ ಸ್ವಂತ ಮನೆ
ಇದೇ ವೇಳೆ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು 2022ರ ವೇಳೆಗೆ ದೇಶದ ಪ್ರತೀ ಕುಟುಂಬಕ್ಕೂ ಸೂರು ಕಲ್ಪಿಸುವ ಗುರಿ ಹೊಂದಿರುವುದಾಗಿ ಹೇಳಿದರು. 20220ರಲ್ಲಿ ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದು, ಈ ವೇಳೆಗೆ ದೇಶದ ಪ್ರತೀ ಕುಟುಂಬವೂ ಮನೆಯನ್ನು ಹೊಂದುವಂತಾಗಬೇಕು. ಮನೆಗಳನ್ನು ನಿರ್ಮಿಸುವ ಕುರಿತ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದ್ದು, ಈ ಮೂಲಕ ಬಹಳಷ್ಟು ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಅವರು ಹೇಳಿದರು.