ನವದೆಹಲಿ: ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದರಿಂದಾಗಿ ಸಾಮಾನ್ಯ ಜನರಿಗೆ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಕೂಡಲೇ ಸಮಸ್ಯೆ ಸಮಸ್ಯೆ ಬಗೆಹರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆದೇಶಿಸಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಬಿಎಸ್'ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಬುಧವಾರ ಮನವಿ ಮಾಡಿದ್ದಾರೆ.
ನೋಟು ನಿಷೇಧ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ನಮ್ಮ ಪಕ್ಷ ಕಪ್ಪುಹಣಕ್ಕೆ ಬೆಂಬಲವನ್ನು ಸೂಚಿಸುತ್ತಿಲ್ಲ. ಕಪ್ಪುಹಣದ ವಿರುದ್ಧ ಹೋರಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧವೂ ನಮ್ಮ ಪಕ್ಷವಿಲ್ಲ. ಆದರೆ, ಕಪ್ಪುಹಣದ ವಿರುದ್ಧ ಹೋರಾಡುವ ಸಲುವಾಗಿ ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಸಮಸ್ಯೆ ಎದುರು ಮಾಡುತ್ತಿರುವುದರ ವಿರುದ್ಧ ನಾವಿದ್ದೇವೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಯೊಂದನ್ನು ಮಾಡುತ್ತಿದ್ದೇನೆ. ನೋಟು ನಿಷೇಧ ಕುರಿತಂತೆ ಗೌರವಯುತ ರಾಷ್ಟ್ರಪತಿಗಳು ಕೂಡಲೇ ಸಮಸ್ಯೆ ಸಮಸ್ಯೆ ಬಗೆಹರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆದೇಶಿಸಿ. ಕೇಂದ್ರ ಸರ್ಕಾರ ಕಠಿಣ ನಿರ್ಧಾರದಿಂದ ಸಾಮಾನ್ಯ ಜನರು ಅನುಭವಿಸುತ್ತಿರುವ ಸಂಕಷ್ಟವನ್ನು ಮೋದಿಯವರಿಗೆ ತಿಳಿಸಿ ಎಂದು ತಿಳಿಸಿದ್ದಾರೆ.
ದುಬಾರಿ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನೋಟಿನ ಮೇಲೆ ನಿಷೇದ ಹೇರಿದ ಬಳಿಕ ಈ ವರೆಗೂ 75 ಮಂದಿ ಸಾವನ್ನಪ್ಪಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಸ್ತುತತೆಯನ್ನು ನಿರೀಕ್ಷಿಸುತ್ತಿದೆ. ಹೀಗಾಗಿ ಮೋದಿಯವರು ಕೂಡಲೇ ಸಂಸತ್ತಿಗೆ ಹಾಜರಾಬೇಕಿದ್ದು, ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ನೋಟಿನ ಮೇಲೆ ನಿಷೇಧ ಹೇರಿರುವುದರ ಹಿಂದೆ ದೊಡ್ಡ ತಂತ್ರವೇ ಅಡಗಿದೆ. ಪ್ರಧಾನಿ ಮೋದಿಯವರಿಗೆ ಒಂದು ಪ್ರಶ್ನೆಯನ್ನು ಕೇಳಲು ಇಚ್ಛಿಸುತ್ತೇನೆ. ಪ್ರಧಾನಮಂತ್ರಿಗಳು ಹೆದರುತ್ತಿರುವುದೇಕೆ? ಎಲ್ಲವನ್ನು ಸರಿಯಾಗಿ ಮಾಡಿದ್ದಾರೆ. ಕಪ್ಪುಹಣದ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇ ಆದರೆ, ಅವರು ಹೆದರುತ್ತಿರುವುದೇತಕ್ಕೆ ಎಂದು ಪ್ರಶ್ನಿಸಿದ್ದಾರೆ.