ದೇಶ

64,252 ಕೋಟಿಗೇರಿದ ಜನಧನ್ ಖಾತೆ ಠೇವಣಿ; ಅಗ್ರ ಸ್ಥಾನದಲ್ಲಿ ಉತ್ತರ ಪ್ರದೇಶ!

Srinivasamurthy VN

ನವದೆಹಲಿ: ನೋಟು ನಿಷೇಧದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಬಹುಉದ್ದೇಶಿತ ಜನ್ ಧನ್ ಯೋಜನೆಗೆ ಭಾರಿ ಪ್ರಮಾಣದ ಠೇವಣಿ ಹರಿದುಬರುತ್ತಿದ್ದು, ನೋಟು ನಿಷೇಧ ಮಾಡಿದ ನವೆಂಬರ್ 8ರಿಂದ ಈ ವರೆಗೂ  ಸುಮಾರು 64,252 ಕೋಟಿ ರು. ಹಣ ಜಮೆಯಾಗಿದೆ.

ಲೋಕಸಭೆ ಕಲಾಪದಲ್ಲಿ ವಿತ್ತ ರಾಜ್ಯ ಸಚಿವ ಸಂತೋಷ ಕುಮಾರ್ ಗಂಗ್ವಾರ್ ಅವರು ಮಾಹಿತಿ ನೀಡಿದ್ದು, ಪ್ರಧಾನ ಮಂತ್ರಿ ಜನಧನ್ ಯೋಜನಾ (ಪಿಎಂಜೆಡಿವೈ) ಅಡಿಯಲ್ಲಿ 25.58 ಕೋಟಿ ಖಾತೆಗಳನ್ನು ತೆರೆಯಲಾಗಿದ್ದು,  ನವೆಂಬರ್ 16ರವರೆಗಿನ ಮಾಹಿತಿಯಂತೆ ರಾಷ್ಟ್ರಾದ್ಯಂತ 64,252.15 ಕೋಟಿ ರುಪಾಯಿ ಠೇವಣಿಯಾಗಿದೆ ಎಂದು ತಿಳಿಸಿದರು.

ಜನಧನ್ ಖಾತೆಗಳಲ್ಲಿ ಜಮೆ ಆಗಿರುವ ಒಟ್ಟು ಠೇವಣಿ ಮೊತ್ತ 64,252.15 ಕೋಟಿ ರುಪಾಯಿಗಳಿಗೆ ಏರಿದ್ದು, 10,670.62 ಕೋಟಿ ರು,ಗಳೊಂದಿಗೆ ಉತ್ತರ ಪ್ರದೇಶ ರಾಜ್ಯ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ದ್ವಿತೀಯ  ಮತ್ತು ರಾಜಸ್ಥಾನ ತೃತೀಯ ಸ್ಥಾನದಲ್ಲಿವೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿತ್ತ ಖಾತೆ ರಾಜ್ಯ ಸಚಿವ ಸಂತೋಷ ಕುಮಾರ್ ಗಂಗ್ವಾರ್ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನಧನ್  ಖಾತೆಗಳನ್ನು ಹೊಂದಿದ್ದು, ಇಲ್ಲಿ 3.79 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳಲ್ಲಿ ಒಟ್ಟು 10,670.62 ಕೋಟಿ ರುಪಾಯಿ ಠೇವಣಿ ಈ ಖಾತೆಗಳಲ್ಲಿ ಜಮೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 2.44  ಕೋಟಿ ಖಾತೆಗಳಿದ್ದು, ಇದರಲ್ಲಿ 7,826.44 ಕೋಟಿ ರುಪಾಯಿ ಜಮೆಯಾಗಿದೆ. ಅಂತೆಯೇ ಬಿಹಾರದಲ್ಲಿ 2.62 ಕೋಟಿ ಖಾತೆಗಳಿದ್ದು, ಇದರಲ್ಲಿಯೂ 4,912.79 ಕೋಟಿ ರು.ಹಣ ಜಮೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದೇ ವೇಳೆ ಜನಧನ್ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ತಪ್ಪಿಸುವ ಸಲುವಾಗಿ 1 ರುಪಾಯಿ ಅಥವಾ 2 ರುಪಾಯಿ ಠೇವಣಿ ಇಡುವಂತೆ ಯಾವುದೇ ಸರ್ಕಾರಿಸ್ವಾಮ್ಯದ ಬ್ಯಾಂಕುಗಳಿಗೆ ಸರ್ಕಾರವಾಗಲಿ ಅಥವಾ ಬ್ಯಾಂಕುಗಳಾಗಲಿ  ಸೂಚನೆ ನೀಡಿರಲಿಲ್ಲ ಎಂದೂ ಸಚಿವರು ಸ್ಪಷ್ಪಪಡಿಸಿದರು.

SCROLL FOR NEXT