ಪಾಕ್ ನೂತನ ಸೇನಾ ಮುಖ್ಯಸ್ಥ ಬಜ್ವಾ ಹಾಗೂ ಭಾರತದ ಮಾಜಿ ಸೇನಾ ಮುಖ್ಯಸ್ಥ ಬಿಕ್ರಮ್ ಸಿಂಗ್ (ಸಂಗ್ರಹ ಚಿತ್ರ)
ನವದೆಹಲಿ: ಪಾಕಿಸ್ತಾನ ಸೇನೆಯ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಲೆಫ್ಟಿನೆಂಟ್ ಜನರಲ್ ಖಮರ್ ಜಾವೇದ್ ಬಾಜ್ವಾ ವಿಷಯದಲ್ಲಿ ಭಾರತ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಸೇನಾ ಮುಖ್ಯಸ್ಥ ಬಿಕ್ರಂ ಸಿಂಗ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ನಿಯೋಗದ ಭಾಗವಾಗಿ ಕಾಂಗೊದಲ್ಲಿ ಬ್ರಿಕ್ರಂ ಸಿಂಗ್ ನೇತೃತ್ವದ ಪಡೆಯಲ್ಲಿ ಖಮರ್ ಜಾವೇದ್ ಬಾಜ್ವಾ ಸಹ ಭಾಗವಹಿಸಿದ್ದರು. ಕಾಂಗೋದಲ್ಲಿ ಬಾಜ್ವಾ ಅದ್ಭುತ ಕಾರ್ಯಾಚರಣೆ ನಡೆಸಿದ್ದರು. ವಿಶ್ವಸಂಸ್ಥೆ ನೀಡಿದ್ದ ಕೆಲಸದಲ್ಲಿ ಬಾಜ್ವಾ ಅದ್ಭುತ ಕೆಲಸಗಳನ್ನು ಮಾಡಿರಬಹುದು ಆದರೆ ಒಮ್ಮೆ ಅವರು ಅವರ ದೇಶಕ್ಕೆ ವಾಪಸ್ ಹೋದ ನಂತರ ಅವರ ರಾಷ್ಟ್ರೀಯ ಹಿತಾಸಕ್ತಿಗಳೇ ಮುಖ್ಯವಾಗಿರುತ್ತದೆ. ಆದ್ದರಿಂದ ಭಾರತ ಪಾಕ್ ನೂತನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಬಾಜ್ವಾ ಪಾಕ್ ಸೇನೆಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿರುವುದರಿಂದ ಅಲ್ಲಿನ ಸೇನೆಯಲ್ಲಿ ಅತಿ ಹೆಚ್ಚು ವ್ಯತ್ಯಾಸಗಳೇನು ಉಂಟಾಗುವುದಿಲ್ಲ. ಆದರೆ ಪಾಕಿಸ್ತಾನದ ಆಂತರಿಕ ಭಯೋತ್ಪಾದನೆಯನ್ನು ಅಪಾಯಕಾರಿ ಎಂದು ಪರಿಗಣಿಸುವ ಸಾಧ್ಯತೆ ಇದೆ ಎಂದು ಬಿಕ್ರಂ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.