ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಿಫಾರಸ್ಸು ಮಾಡಿದ ಬಳಿಕ ರು.500 ಹಾಗೂ 1,000 ಮುಖಬೆಲೆಯ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿತ್ತು ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸರ್ಕಾರ ನಿಷೇಧ ಅನಾಣ್ಯೀಕರಣವಲ್ಲ. ಇದೊಂದು ತಪ್ಪು ತಿಳುವಳಿಕೆಯಾಗಿದ್ದು, ಆರ್'ಬಿಐ ಶಿಫಾರಸ್ಸು ಮಾಡಿದ ಬಳಿಕವಷಅಟೇ ಕೇಂದ್ರ ಸರ್ಕಾರ ರು.500 ಹಾಗೂ 1,000 ನೋಟಿನ ಮೇಲೆ ನಿಷೇಧ ಹೇರಿತ್ತು ಎಂದು ಹೇಳಿದ್ದಾರೆ.
ಕಪ್ಪುಹಣದ ವಿರುದ್ಧ ಎನ್ ಡಿಎ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲನೇ ಬಾರಿ ಸಂಪುಟ ಸಭೆಯನ್ನು ನಡೆಸಿದಾಗ ಕಪ್ಪುಹಣದ ವಿರುದ್ಧ ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದರು.
ತೆರಿಗೆ ಪಾವತಿಯಲ್ಲಿ ಸಾಕಷ್ಟು ನಿಯಮಗಳನ್ನು ಜಾರಿಗೆ ತಂದು ಕಪ್ಪುಹಣವನ್ನು ಬಹಿರಂಗ ಪಡಿಸುವಂತೆ ಹಾಗೂ ಅದಕ್ಕೆ ದಂಡವನ್ನು ವಿಧಿಸಿದ್ದರು. ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆ ಆದಾಯ ಯೋಜನೆಯನ್ನು ಜಾರಿಗೆ ತಂದು ಬೇನಾಮಿ ಆಸ್ತಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದರು. ರು.500 ಹಾಗೂ 1,000 ಗಳ ಮೇಲೆಯೇ ನಿಷೇಧ ಹೇರುವ ಮೂಲಕ ಎಲ್ಲಾ ಅಕ್ರಮಗಳಿಗೂ ಅಂತ್ಯ ಹಾಡಿದ್ದರು.
ಇದೀಗ ದೇಶ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಹಾದಿಯಲ್ಲಿ ಆಭಿವೃದ್ಧಿಗೊಳ್ಳುತ್ತಿದೆ. ದೇಶವನ್ನು ಭ್ರಷ್ಟಾಚಾರ ಮುಕ್ತ ರಾಷ್ಟ್ರವಾಗಿಸುವುದು ಇದೀಗ ನಮ್ಮ ಜವಾಬ್ದಾರಿಯಾಗಿದೆ. ಆರ್ಥಿಕ ಚಟುವಟಿಕೆಯಲ್ಲಿ ಡಿಜಿಟಲೀಕರಣ ತಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕಳೆದ ಒಂದು ವರ್ಷದಲ್ಲಿ ರು.36,000 ಕೋಟಿ ಹಣವನ್ನು ಉಳಿತಾಯ ಮಾಡಿದೆ. ಮನ್ರೇಗಾ ಯೋಜನೆಯಡಿಯಲ್ಲಿ ಜನರಿಗೆ ಆಧಾರ್ ಸಂಖ್ಯೆಯ ಮೂಲಕವೇ ಖಾತೆಗಳಿಗೆ ಹಣವನ್ನು ನೇರವಾಗಿ ನೀಡಲಾಗುತ್ತಿದೆ. ಸಾಮಾಜಿಕ ಯೋಜನೆಗಳು ಬಡವರಿಗೆ ಲಾಭವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.