ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ವಿರೋಧಿಸಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದೆಯೇ ಹೊರತು ಭಾರತ್ ಬಂದ್ ಗೆ ಕರೆ ನೀಡಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಈ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು, ಜನತೆಗೆ ಬಿಜೆಪಿ ಸುಳ್ಳು ಮಾಹಿತಿ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಭಾರತ್ ಬಂದ್ ಗೆ ಕರೆ ನೀಡಿಲ್ಲ. ಕೇವಲ ಆಕ್ರೋಶ್ ದಿವಸ್ ಮೂಲಕ ಪ್ರತಿಭಟನೆ ನಡೆಸುವುದಾಗಿ ಹೇಳಿತ್ತು. ಆದರೆ ಬಿಜೆಪಿ ಪಕ್ಷ ಜನತೆಗೆ ಸುಳ್ಳು ಮಾಹಿತಿ ನೀಡುವ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಅಭೂತಪೂರ್ವ ಜನ ಬೆಂಬಲ ನೋಡಿ ಕಾಂಗ್ರೆಸ್ ಯೂಟರ್ನ್: ವೆಂಕಯ್ಯನಾಯ್ಡು
ಇನ್ನು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಹೇಳಿಕೆ ಬೆನ್ನಲ್ಲೇ ಆಕ್ರೋಶ್ ದಿವಸ್ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಅವರು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಕ್ತವಾಗುತ್ತಿರುವ ಅಪಾರ ಜನ ಬೆಂಬಲ ನೋಡಿ ಕಾಂಗ್ರೆಸ್ ಪಕ್ಷ ಯೂಟರ್ನ್ ಹೊಡೆದಿದ್ದು, ಕೇವಲ ಪ್ರತಿಭಟನೆ ಎಂದು ಹೇಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹೇಗಾದರೂ ಸರಿ ಮಾಧ್ಯಮಗಳಲ್ಲಿ ಸುದ್ದಿಯಾಗಬೇಕು ಎಂದು ಹವಣಿಸುತ್ತಿದ್ದು, ಕಳೆದು ಹೋಗಿರುವ ತನ್ನ ಆಸ್ತಿತ್ವವನ್ನು ಹೀಗಾದರೂ ಸರಿ ಉಳಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಅವರು ಹೇಳಿದರು. ನೋಟು ನಿಷೇಧ ಕುರಿತಂತೆ ಸಂಸತ್ ನಲ್ಲಿ ಚರ್ಚೆಗೆ ಅವಕಾಶ ನೀಡದೇ ಪ್ರತಿಭಟನೆ ಮತ್ತು ರ್ಯಾಲಿ ಹೆಸರಲ್ಲಿ ಜನರಿಗೆ ಕಾಂಗ್ರೆಸ್ ಅನಾನುಕೂಲ ಉಂಟು ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.