ಚೆನ್ನೈ: ದೇಶದ ಹಲವು ರಾಜ್ಯಗಳಲ್ಲಿ ಬಾಂಬ್ ಸ್ಪೋಟಿಸಿ ಶಾಂತಿ ಕಾಪಾಡಲು ಸಂಚು ರೂಪಿಸಿದ್ದ ಆಲ್ ಖೈದಾ ಭಯೋತ್ಪಾದನಾ ಸಂಘಟನೆಯ ಮೂವರು ಉಗ್ರರನ್ನು ತಮಿಳುನಾಡು ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾದಳ ಸಿಬ್ಬಂದಿ ಬಂಧಿಸಿದ್ದಾರೆ.
ಮೂವರು ಉಗ್ರರನ್ನು ತಮಿಳುನಾಡಿನ ಮಧುರೈ ನಲ್ಲಿ ಬಂಧಿಸಲಾಗಿದೆ. ಬಂಧಿತ ಉಗ್ರರನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿಗೆ ಕರೆತರಲಾಗಿದೆ.
ಮೈಸೂರು ಕೋರ್ಟ್ ಆವರಣದಲ್ಲಿ ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣ, ಚಿತ್ತೂರ್, ಕೊಲ್ಲಂ ನೆಲ್ಲೂರ ಮತ್ತು ಮಲಪ್ಪುರಂ ಗಳಲ್ಲಿ ನಡೆದಿದ್ದ ಸ್ಫೋಟ ಪ್ರಕರಣಗಳಲ್ಲಿ ಬಂಧಿತ ಉಗ್ರರ ಕೈವಾಡವಿದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರುಗಳ ಹತ್ಯೆಗೆ ಟಾರ್ಗೆಟ್ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.ಜೊತೆಗೆ ವಿದೇಶಾಂಗ ಕಚೇರಿ ಮೇಲೂ ಕೂಡ ದಾಳಿಗೆ ಸಂಚು ನಡೆದಿತ್ತು ಎನ್ನಲಾಗಿದೆ.
ಎಂ. ಕರೀಮ್, ಆಸಿಫ್ ಸುಲ್ತಾನ್ ಮೊಹಮದ್,ಮತ್ತು ಅಬ್ಬಾಸ್ ಅಲಿ ಎಂಬುವರನ್ನು ಬಂಧಿಸಿರುವ ಪೊಲೀಸರು ಅವರಿಂದ ಹಲವು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಮೂವರು ದಕ್ಷಿಣ ತಮಿಳುನಾಡಿನಲ್ಲಿ ಆಲ್ ಖೈದಾ ನೆಟ್ ವರ್ಕ್ ಬೆಳೆಸಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇನ್ನು ಹಕೀಮ್ ಮತ್ತು ದಾವೂದ್ ಸುಲೇಮಾನ್ ಎಂಬ ಉಗ್ರ ಸಂಘಟನಾಕಾರರನ್ನು ಬಂಧಿಸಲು ಎನ್ ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ.