ಭಾರತ-ಪಾಕ್ ದ್ವಿಪಕ್ಷೀಯ ಮಾತುಕತೆ ಇಲ್ಲ
ಇಸ್ಲಾಮಾಬಾದ್: ಡಿ 3-4 ರಂದು ಪಂಜಾಬ್ ನ ಅಮೃತ್ ಸರದಲ್ಲಿ ನಡೆಯಲಿರುವ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಭಾರತ-ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಪಾಕ್ ಪ್ರಧಾನಿಯ ಸಲಹೆಗಾರ ಸರ್ತಾಜ್ ಅಜೀಜ್ ನೇತೃತ್ವದ ಪಾಕಿಸ್ತಾನದ ನಿಯೋಗ ಅಮೃತ್ ಸರದಲ್ಲಿ ನಡೆಯಲಿರುವ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಭಾಗವಹಿಸಲಿದೆ. ಆದರೆ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಯಾವುದೇ ಇರಾದೆ ಪಾಕಿಸ್ತಾನಕ್ಕೆ ಇಲ್ಲ. ಚೆಂಡು ಈಗ ಭಾರತದ ಅಂಗಳದಲ್ಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸುವುದರ ಬಗ್ಗೆ ಪಾಕಿಸ್ತಾನದಿಂದ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಭಾರತ ನ.30 ರಂದು ಸ್ಪಷ್ಟನೆ ನೀಡಿತ್ತು. ಕಳೆದ ವರ್ಷ ನಡೆದ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಸಮಗ್ರ ದ್ವಿಪಕ್ಷೀಯ ಮಾತುಕತೆ ನಡೆಸುವುದಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ ಸೂಚಿಸಿದ್ದವು. ಆದರೆ ಕಳೆದ ವರ್ಷದ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದ ಬಳಿಕ ಪಾಕಿಸ್ತಾನದ ಭಯೋತ್ಪಾದಕರು ಭಾರತದಲ್ಲಿ ನಡೆಸಿದ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಮಾತುಕತೆ ಸ್ಥಗಿತಗೊಂಡಿದೆ.