ಕಾಶ್ಮೀರ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಸೇನಾ ಕ್ಯಾಂಪ್ ನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದ್ದಾರೆ. ಅ.6 ರಂದು ಬೆಳಿಗ್ಗೆ 5 ಗಂಟೆ ವೇಳೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ಸೇನಾ ಪಡೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೆ ಗುಂಡೇಟು ತಗುಲಿರುವ ವರದಿಗಳಾಗಿವೆ
ಉಗ್ರರ ಅಡಗುದಾಣಗಳನ್ನು ಶೋಧಿಸುತ್ತಿದ್ದ ಸೇನಾಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರ ದಾಳಿಯನ್ನು ಸೇನಾಪಡೆ ಸಮರ್ಥವಾಗಿ ಎದುರಿಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಸೇನಾ ಅಧಿಕಾರಿ ಪಿಟಿಐ ಗೆ ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ 5 ಗಂಟೆ ವೇಳೆಯಲ್ಲಿ ಮೊದಲ ಬಾರಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರನ್ನು ಪತ್ತೆ ಮಾಡುವುದಕ್ಕಾಗಿ ಸೇನಾ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ 6:30 ಕ್ಕೆ ಮತ್ತೊಮ್ಮೆ ಉಗ್ರರು ದಾಳಿ ನಡೆಸಿದ್ದಾರೆ ಸೇನಾ ಕ್ಯಾಂಪ್ ನ್ನು ಗುರಿಯಾಗಿರಿಸಿಕೊಂಡು ಉಗ್ರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳಿಸಲಾಗಿದೆ ಎಂದು ಸೇನಾ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದೆ ವೇಳೆ ನೌಗಾಮ್ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ ಹಾಗು ರಾಮ್ ಪುರ್ ಬಳಿ ಭಾರತದ ಗಡಿಯೊಳಗೆ ನುಸುಳುವ ಪಾಕ್ ಬೆಂಬಲಿತ ಮೂವರು ಭಯೋತ್ಪಾದಕರ ಯತ್ನವನ್ನು ಸೇನೆ ವಿಫಲಗೊಳಿಸಿದೆ. ಭಾರತದ ಗಡಿಯೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದವರಿಗೆ ಪಾಕಿಸ್ತಾನದ ಬೆಂಬಲವಿತ್ತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಭಾರತೀಯ ಸೇನೆ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿದ ನಂತರ, ಕಾಶ್ಮೀರದಲ್ಲಿ ಸೇನಾ ಕ್ಯಾಂಪ್ ನ್ನು ಗುರಿಯಾಗಿರಿಸಿಕೊಂಡು ಉಗ್ರರು ನಡೆಸಿರುವ ಮೂರನೇ ದಾಳಿ ಯತ್ನ ಇದಾಗಿದೆ. ಮೂರೂ ದಿನಗಳ ಹಿಂದೆ ಉಗ್ರರು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇನಾ ಕ್ಯಾಂಪ್ ನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಬಿಎಸ್ ಎಫ್ ಯೋಧ ಹುತಾತ್ಮನಾಗಿದ್ದರು.