ಶ್ರೀನಗರ: ಕಾಶ್ಮೀರ ಹಿಂಸಾಚಾರ 90ನೇ ದಿನಕ್ಕೆ ಕಾಲಿಟ್ಟಿದ್ದು, ಬಂದ್ ನಿಂದ ಬೇಸತ್ತಿರುವ ಜನತೆ ಇದೀಗ ಗಿಲಾನಿ ವಿರುದ್ಧವೇ ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ಹತ್ಯೆ ಖಂಡಿಸಿ ನೀಡಲಾಗಿದ್ದ ಪ್ರತಿಭಟನೆ ಕರೆಯಿಂದಾಗಿ ಕಾಶ್ಮೀರದಲ್ಲಿ ಹಿಂಸಾಚಾರ 90ನೇ ದಿನಕ್ಕೆ ಕಾಲಿಟ್ಟಿದೆ. ಈಗಲೂ ಕಾಶ್ಮೀರದ ಹಲವಡೆ ಬಂದ್ ನ್ನು ಆಚರಿಸಲಾಗುತ್ತಿದ್ದು, ಬಂದ್ ಕರೆಗೆ ಕಾಶ್ಮೀರದ ಜನತೆ ಬೇಸತ್ತು ಹೋಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರತಿಭಟನೆಗೆ ಕರೆ ನೀಡಿದ ಪ್ರತ್ಯೇಕತಾವಾದಿ ಗಿಲಾನಿ ವಿರುದ್ಧವೇ ಪ್ರತಿಭಟನೆ ನಡೆಸಲು ಮುಂದಾಗಿದೆ.
ಕಳೆದ ಮೂರು ತಿಂಗಳಿನಿಂದಲೂ ಕಾಶ್ಮೀರದಲ್ಲಿ ಸುದೀರ್ಘವಾಗಿ ಬಂದ್ ಆಚರಿಸಲಾಗುತ್ತಿದೆ. ಬಂದ್ ನಿಂದಾಗಿ ಇಲ್ಲಿನ ಜನತೆ ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದೆ. ಹೊರಗೆ ಹೋಗಿ ಕೆಲಸ ಮಾಡಲು ಜನರು ಹೆದರುತ್ತಿದ್ದಾರೆ. ಹಣವಿಲ್ಲದೆಯೇ ಮಕ್ಕಳಿಗೆ ಊಟ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಇದೇ ವೇಳೆ ಹುರಿಯತ್ ನಾಯಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬಂದ್ ಹಾಗೂ ಪ್ರತಿಭಟನೆಗಳಿಗೆ ಕರೆ ನೀಡುತ್ತಿರುವ ನಾಯಕರು ನಮ್ಮ ಬಗ್ಗೆ, ನಮ್ಮ ಕುಟುಂಬದ ಸದಸ್ಯರ ಬಗ್ಗೆ ಸ್ವಲ್ಪವೂ ಕರುಣೆ ತೋರುತ್ತಿಲ್ಲ ಎಂದು ಹೇಳಿದ್ದಾರೆ.
ಈಗಲೂ ಕಾಶ್ಮೀರದಲ್ಲಿ ಹಲವೆಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಮುಂದುವರೆದಿದ್ದು, ಇಂಟರ್ನೆಟ್ ಸೇವೆಗಳ ಸ್ಥಗಿತವನ್ನು ಮುಂದುವರೆಸಲಾಗಿದೆ. ಸ್ಥಳೀಯ ಅಂಗಡಿಗಳು, ಶಾಲೆಗಳು ಬಂದ್ ಆಗಿದೆ. ಬಂದ್ ನಿಂದಾಗಿ ಸಾರ್ವಜನಿಕ ಪ್ರಯಾಣ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರತೊಡಗಿದೆ.
ಉರಿ ಸೆಕ್ಟರ್ ಹಾಗೂ ಬಾರಾಮುಲ್ಲಾದ ಸೇನಾ ಶಿಬಿರಗಳ ಮೇಲೆ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.