ನವದೆಹಲಿ: ಬಿಹಾರ ಸರ್ಕಾರದ ಮದ್ಯ ನಿಷೇಧ ಆದೇಶವನ್ನು ವಜಾಗೊಳಿಸಿದ್ದ ಪಾಟ್ನಾ ಹೈಕೋರ್ಟ್ ಆದೇಶಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ನಿತಿಶ್ ಕುಮಾರ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ 6 ವಾರಗಳ ಕಾಲವಕಾಶ ಹಾಗೂ ಬಿಹಾರ ಸರ್ಕಾರಕ್ಕೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಮದ್ಯ ಮಾರಾಟ ನಿಷೇಧ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಬಿಹಾರ ಸರ್ಕಾರದ ಕ್ರಮ ಕಾನೂನು ಬಾಹಿರ ಎಂದು ಮದ್ಯ ನಿಷೇಧ ಆದೇಶವನ್ನು ರದ್ದುಗೊಳಿಸಿತ್ತು.