ನವದೆಹಲಿ: ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅವರು ಬಹುಶಃ ಜಯಗಳಿಸಬಹುದು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸೆಕ್ಸ್ ಟೇಪ್ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿರುವ ಡೋನಾಲ್ಡ್ ಟ್ರಂಪ್ ತಮ್ಮ ವಿವಾದಗಳಿಂದಾಗಿಯೇ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ತಜ್ಞರು ವ್ಯಾಖ್ಯಾನ ಮಾಡುತ್ತಿದ್ದರೆ ಇತ್ತ ಬಿಜೆಪಿ ಮುಖಂಡ ಹಾಗೂ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಮಾತ್ರ ವ್ಯತಿರಿಕ್ತ ಭವಿಷ್ಯ ನುಡಿದಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಶಃ ಡೋನಾಲ್ಡ್ ಟ್ರಂಪ್ ಅವರೇ ಗೆಲುವು ಸಾಧಿಸಬಹುದು ಎಂದು ಹೇಳಿದ್ದಾರೆ.
ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರ ಆಡಳಿತ ಸಂದರ್ಭದ ಬಹುತೇಕ ಸಂದರ್ಭಗಳಲ್ಲಿ ಅವರ ಪತ್ನಿ ಹಿಲರಿ ಕ್ಲಿಂಟನ್ ಅವರು ಆಡಳಿತದಲ್ಲಿ ಮೂಗು ತೂರಿಸುತ್ತಿದ್ದರು. ಇದು ಅಂದು ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಕ್ಲಿಂಟನ್ ಆಡಳಿತಾವಧಿಯಲ್ಲಿ ಅವರು ತೆಗೆದುಕೊಂಡಿದ್ದ ಕೆಲ ನಿರ್ಣಯಗಳು ಹಾಗೂ ಕೆಟ್ಟ ಆಡಳಿತ ನಡೆ ಇಂದಿಗೂ ಅಮೆರಿಕನ್ನರ ಮನದಲ್ಲಿದೆ. ಇದು ಇದೀಗ ಬಹುಶಃ ಡೋನಾಲ್ಡ್ ಟ್ರಂಪ್ ಅವರಿಗೆ ನೆರವಾಗಬಹುದು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಇದೇ ವೇಳೆ ಹಿಲರಿ ಕ್ಲಿಂಟನ್ ರನ್ನು ಕೆಟ್ಟ ಆಡಳಿತಗಾರರು ಎಂದಿರುವ ಸ್ವಾಮಿ, ತಮ್ಮ ಆಯ್ಕೆ ಡೋನಾಲ್ಡ್ ಟ್ರಂಪ್ ಎಂದು ಬೆಂಬಲ ಸೂಚಿಸಿದ್ದಾರೆ.