ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಪರಿಣಾಮ ಓರ್ವ ಯೋಧ ಹುತಾತ್ಮನಾಗಿರುವ ಘಟನೆ ಭಾನುವಾರ ನಡೆದಿದೆ.
ರಜೌರಿ ಜಿಲ್ಲೆಯಗ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ನಡೆಸಲಾಗುತ್ತಿದ್ದು, ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಪ್ರತೀ ದಾಳಿ ಮಾಡುವ ಮೂಲಕ ದಿಟ್ಟ ಉತ್ತರವನ್ನು ನೀಡುತ್ತಿದೆ. ಗುಂಡಿನ ದಾಳಿ ವೇಳೆ ಓರ್ವ ಭಾರತೀಯ ಯೋಧ ಸಿಪಾಯಿ ಸುದೀಸ್ ಕುಮಾರ್ ಅವರು ಹುತಾತ್ಮರಾಗಿದ್ದಾರೆಂದು ಜಮ್ಮುವಿನ ರಕ್ಷಣಾ ಸಚಿವ ಲೆಫ್ಟಿನೆಂಟ್ ಕರ್ನಲ್ ಮನೀಷ್ ಮೆಹ್ತಾ ಅವರು ಹೇಳಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ಬಳಿಕ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನದ ಹವಣಿಸುತ್ತಿದ್ದು, ಗಡಿ ನುಸುಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಇದರಂತೆ ನಾಗರೀಕರು ಹಾಗೂ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿಗಳನ್ನು ನಡೆಸುತ್ತಿದೆ. ಸೀಮಿತ ದಾಳಿ ಬಳಿಕ ಪಾಕಿಸ್ತಾನ ಈವರೆಗೂ 25 ಬಾರಿ ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ.