ನವದೆಹಲಿ: ದೇಶದ ಜನತೆಗೆ ದೇಶ ಕಾಯುವ ಯೋಧರಿಗೆ ಕೃತಜ್ಞತೆ ಅರ್ಪಿಸಲು ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿಯಾನವೊಂದನ್ನು ಪ್ರಾರಂಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ #ಸಂದೇಶ್2 ಸೋಲ್ಜರ್ಸ್ ಹ್ಯಾಶ್ ಟ್ಯಾಗ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ತಮ್ಮ ಊರಿನಿಂದ ದೂರ ಉಳಿದು ದೇಶದ ಗಡಿ ಕಾಯುತ್ತಿರುವ ಯೋಧರಿಗೆ ದೀಪಾವಳಿ ದಿನದಂದು ದೇಶದ ಜನರು ಕೃತಜ್ಞತಾ ಪೂರ್ವಕ ಸಂದೇಶಗಳನ್ನು ಕಳಿಸಲು ಈ ಅಭಿಯಾನ ಪ್ರಾರಂಭ ಮಾಡಿರುವುದಾಗಿ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಅಭಿಯಾನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಹ ಭಾರತೀಯ ಸೇನೆ ಬಗ್ಗೆ ತಮಗಿರುವ ಅಭಿಮಾನವನ್ನು ತಿಳಿಸಿ ಯೋಧರಿಗೆ ಕೃತಜ್ಞತೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಅಭಿಯಾನದ ಕುರಿತಾದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ಯೋಧರಿಗೆ ಸಂದೇಶ ಕಳಿಸುವಂತೆ ದೇಶದ ಜನತೆಗೆ ಪ್ರಧಾನಿ ಮನವಿ ಮಾಡಿದ್ದಾರೆ. ಇನ್ನು ನರೇಂದ್ರ ಮೋದಿ ಆಪ್, ಮೈ ಗೌರ್ನಮೆಂಟ್.ಇನ್ ಹಾಗೂ ಆಲ್ ಇಂಡಿಯಾ ರೇಡಿಯೋ ಮೂಲಕವೂ ಸಹ ಯೋಧರಿಗೆ ಸಂದೇಶ ಕಳಿಸಬಹುದಾಗಿದೆ.