ಮುಂಬೈ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ಗಳ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಶಿವಸೇನೆ ಎಚ್ಚರಿಕೆ ನೀಡಿದ್ದು, ಮತ್ತೊಂದು ಸೀಮಿತ ದಾಳಿ ನಡೆಸಲು ಭಾರತ ಹಿಂಜರಿಯುವುದಿಲ್ಲ ಎಂದು ಶುಕ್ರವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕಿ ಮನೀಷಾ ಕಯಾಂಡೆ ಅವರು, ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ಬಳಿಕವೂ ಪಾಕಿಸ್ತಾನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗಡಿಯಲ್ಲಿ ಈ ವರೆಗೂ 30ಕ್ಕೂ ಹೆಚ್ಚು ಕದನ ವಿರಾಮ ಉಲ್ಲಂಘನೆಯನ್ನು ಮಾಡಲಾಗಿದೆ. ಕದನ ವಿರಾಮ ಉಲ್ಲಂಘನೆ ಪ್ರತೀನಿತ್ಯ ನಡೆಯುತ್ತಲೇ ಇರುತ್ತದೆ. ಪಾಕಿಸ್ತಾನದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಬರುತ್ತಿದ್ದರೂ, ಇಂದಿಗೂ ನಮ್ಮ ಯೋಧರು ಗಡಿಯಲ್ಲಿ ಹುತಾತ್ಮರಾಗುತ್ತಿದ್ದಾರೆ. ಪಾಕಿಸ್ತಾನದ ಈ ನಡೆಯ ವಿರುದ್ಧ ಭಾರತ ಮತ್ತಷ್ಟು ಕಠಿಣ ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಕದನ ವಿರಾಮ ಉಲ್ಲಂಘನೆ ಮಾಡಿ, ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ ವಿರುದ್ಧ ಮತ್ತೊಂದು ಸೀಮಿತ ದಾಳಿ ನಡೆಸುವ ಬಗ್ಗೆ ಭಾರತ ಚಿಂತನೆ ನಡೆಸಬೇಕಿದೆ. ಭಾರತದ ವಿರುದ್ಧ ಪಾಕಿಸ್ತಾನ ಸೇನೆ ಹಾಗೂ ಭಯೋತ್ಪಾದಕ ಸಂಘಟನೆಗಳು ಕೈಜೋಡಿಸಿ ಕೆಲಸ ಮಾಡುತ್ತಿದೆ ಎಂಬ ಶಂಕೆಗಳು ವ್ಯಕ್ತವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.