ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಸೈನಿಕರ ಪುಂಡಾಟ ಕಾಲ ಕಳೆಯುತ್ತಿದ್ದಂತೆ ಹೆಚ್ಚುತ್ತಲೇ ಬಂದಿದ್ದು, ಸಾಂಬಾ, ಪೂಂಚ್ ಜಿಲ್ಲೆ ಹಾಗೂ ಮಂಧಾರ್ ಪ್ರದೇಶದಲ್ಲಿ ನಡೆಸಲಾಗಿರುವ ಅಪ್ರಚೋದಿತ ಶೆಲ್ ದಾಳಿಗೆ 6 ನಾಗರೀಕರು ಸಾವನ್ನಪ್ಪಿ, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಇಂದು ಬೆಳಿಗ್ಗೆಯಷ್ಟೇ ರಾಮ್ಗರ್ಹ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ 19 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿದ್ದಳು. ಇದರಂತೆ ಸಾಂಬಾ ಜಿಲ್ಲೆ, ಪೂಂಚ್ ಜಿಲ್ಲೆ ಹಾಗೂ ಮಂಧಾರ್ ಪ್ರದೇಶಗಳಲ್ಲೂ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ದಾಳಿಗೆ 6 ನಾಗರೀಕರು ಸಾವನ್ನಪ್ಪಿದ್ದಾರೆಂದು ಮೂಲಗಳು ಮಾಹಿತಿ ನೀಡಿದೆ.
ರಾಮ್ಗರ್ಹ್ ಹಾಗೂ ಸಾಂಬಾ ಜಿಲ್ಲೆಯಲ್ಲಿ ನಡೆದ ಅಪ್ರಚೋದಿತ ಶೆಲ್ ದಾಳಿ ಐದು ನಾಗರೀಕರು ಸಾವನ್ನಪ್ಪಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಪಾಕಿಸ್ತಾನ ಸೈನಿಕರು 82 ಎಂಎಂ ಮತ್ತು 120 ಎಂಎಂ ಶೆಲ್ ಗಳ ದಾಳಿ ನಡೆಸುತ್ತಿದ್ದು, ದಾಳಿಯಲ್ಲಿ ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.