ದೇಶ

ಕಾಶ್ಮೀರದಲ್ಲಿ ಕರ್ಫ್ಯೂ ಹೇರಿಕೆ, ಮಸೀದಿಗಳಲ್ಲಿ ಮಾತ್ರ ಈದ್ ಪ್ರಾರ್ಥನೆ

Sumana Upadhyaya
ಶ್ರೀನಗರ: ಪ್ರತ್ಯೇಕತಾವಾದಿಗಳು ಈದ್ ಪ್ರಾರ್ಥನೆ ನಂತರ ಪ್ರತಿಭಟನೆಗೆ ಕರೆ ನೀಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಕಾಶ್ಮೀರದ ಎಲ್ಲಾ 10 ಜಿಲ್ಲೆಗಳಲ್ಲಿ ನಾಳೆ ಕರ್ಫ್ಯೂ ಹೇರಿದ್ದಾರೆ.
ಹೆಚ್ಚಿನ ಹಿಂಸಾಚಾರವನ್ನು ತಪ್ಪಿಸಲು ಶ್ರೀನಗರ ಸೇರಿದಂತೆ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಈದ್ ಸಂಬಂಧ ಸಾರ್ವಜನಿಕ ಸಭೆಗೆ ಆಯಾ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಇದೇ ಮೊದಲ ಬಾರಿಗೆ ಶ್ರೀನಗರದ ಪ್ರಖ್ಯಾತ ಹಸ್ರತ್ ಬಾಲ್ ಸಮಾಧಿ ಬಳಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸುತ್ತಿಲ್ಲ. ಜನರು ಸ್ಥಳೀಯ ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿದೆ.
ಸಾಮಾನ್ಯವಾಗಿ ಬಕ್ರೀದ್ ದಿನ ಜನರಿಂದ ಗಿಜಿಗಿಡುತ್ತಿದ್ದ ಶ್ರೀನಗರದ ಮಾರುಕಟ್ಟೆಯಲ್ಲಿ ಇಂದು ಜನರಿಲ್ಲದೆ ನಿರ್ಜನತೆ ಕಾಡುತ್ತಿದೆ. ಬೇಕರಿ ಮತ್ತು ತಿಂಡಿ ತಿನಿಸುಗಳ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಕುರಿ ಮತ್ತು ಮೇಕೆಯ ಮಾರಾಟಕ್ಕೆ ಕಾಯುತ್ತಿದ್ದ ಮಾರಾಟಗಾರರಿಗೆ ಈ ವರ್ಷ ವ್ಯಾಪಾರ ಅಷ್ಟೊಂದು ಉತ್ತಮವಾಗಿ ಆಗಲಿಲ್ಲ.
ಕಳೆದ ಆಗಸ್ಟ್ 15ರಂದು ಶ್ರೀನಗರದ ನೌಹಟ್ಟಾದಲ್ಲಿ ಬಂದೂಕು ದಾಳಿಯಲ್ಲಿ ಗಾಯಗೊಂಡ ರೌಫ್ ಅಹ್ಮದ್ ಎಂಬ ಪೊಲೀಸ್ ಕಾನ್ಸ್ಟೇಬಲ್  ಮೃತಪಟ್ಟಿದ್ದಾರೆ. 
ಅನಂತನಾಗ್ ಪಟ್ಟಣದ ಶೆರ್ ಬಾಗ್ ಪೊಲೀಸ್ ಠಾಣೆ ಮೇಲೆ ಉಗ್ರಗಾಮಿಗಳು ಗ್ರೆನೇಡ್ ಎಸೆದಿದ್ದರಿಂದ ನಿನ್ನೆ ಓರ್ವ ನಾಗರಿಕ ಮೃತಪಟ್ಟು ಇತರ 17 ಮಂದಿ ಗಾಯಗೊಂಡಿದ್ದಾರೆ. ಈ ಮೂಲಕ ಹಿಂಸಾಚಾರ ಪೀಡಿತ ಕಣಿವೆ ರಾಜ್ಯದಲ್ಲಿ ಜುಲೈಯಿಂದ ಇಲ್ಲಯವರೆಗೆ ಮೃತಪಟ್ಟವರ ಸಂಖ್ಯೆ 80ಕ್ಕೇರಿದೆ.
ಬಟಮಲೂ ಪ್ರದೇಶದಲ್ಲಿ ಕಲ್ಲೆಸೆದ ಗುಂಪು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಜಗಳವಾಗಿದ್ದು ಬಿಟ್ಟರೆ ಇಂದು ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.
ಮುನ್ನೆಚ್ಚರಿಕೆ ಕ್ರಮವಾಗಿ ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಇಂಟರ್ ನೆಟ್, ದೂರವಾಣಿ ಸೇವೆ ಸ್ಥಗಿತಗೊಳಿಸಲಾಗಿದೆ.
SCROLL FOR NEXT