ಕೊಯಮತ್ತೂರು: ಟೆಕ್ಕಿ ಸ್ವಾತಿ ಕೊಲೆ ಪ್ರಕರಣ ಹಸಿರಾಗಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿ ಅಂತಹುದೇ ಮತ್ತೊಂದು ದುರಂತ ಪ್ರೇಮ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪ್ರೀತಿ ನಿರಾಕರಿಸಿದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಕೊಂದು ಹಾಕಿದ್ದಾನೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದ್ದು, 23 ವರ್ಷದ ಎಸ್ ಧನ್ಯಾ ಎಂಬ ಯುವತಿಯನ್ನು 27 ವರ್ಷದ ಜಹೀರ್ ಎಂಬ ಭಗ್ನ ಪ್ರೇಮಿ ಕೊಂದು ಹಾಕಿದ್ದಾನೆ. ಪೊಲೀಸ್ ನೀಡಿರುವ ಮಾಹಿತಿಯಂತೆ ಭಗ್ನ ಪ್ರೇಮಿ ಜಹೀರ್ ಕಳೆದ ಹಲವು ದಿನಗಳಿಂದ ಧನ್ಯಾಳ ಹಿಂದೆ ಬಿದ್ದಿದ್ದ. ಮೃತ ಧನ್ಯಾಗೆ ಇತ್ತೀಚೆಗಷ್ಟೇ ವಿವಾಹ ನಿಶ್ಚಯಕೂಡ ಆಗಿತ್ತು. ಒಂದೆರಡು ಬಾರಿ ಆಕೆಯ ಬಳಿ ಪ್ರೇಮ ನಿವೇದನೇ ಮಾಡಿದ್ದನಾದರೂ, ಧನ್ಯಾ ಮಾತ್ರ ಅದನ್ನು ನಿರಾಕರಿಸುತ್ತಾ ಬಂದಿದ್ದಳು. ಆದರೆ ನಿನ್ನೆ ಧನ್ಯಾಳ ಮನೆಗೆ ಬಂದ ಜಹೀರ್ ಆಕೆಯ ಮೇಲೆ ತೀವ್ರ ಹಲ್ಲೆ ಮಾಡಿ ಕೊಂದು ಹಾಕಿದ್ದಾನೆ ಎಂದು ಹೇಳಿದ್ದಾರೆ.
ಘಟನೆ ಸಂದರ್ಭದಲ್ಲಿ ಧನ್ಯಾಳ ಮನೆಯಲ್ಲಿ ಯಾರೂ ಇರಲಿಲ್ಲವಂತೆ. ಪೋಷಕರು ಷಾಪಿಂಗ್ ತೆರಳಿದ್ದು, ಇದನ್ನೇ ತನ್ನ ಕುಕೃತ್ಯಕ್ಕೆ ಬಳಸಿಕೊಂಡ ಜಹೀರ್ ಹಿಂಬಾಗಿಲ ಮೂಲಕ ಮನೆಯೊಳಗೆ ಪ್ರವೇಶಿಸಿದ್ದಾನೆ. ಧನ್ಯಾ ಒಬ್ಬಳೇ ಇರುವುದನ್ನು ಕಂಡ ಜಹೀರ್ ತಾನು ತಂದಿದ್ದ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಬಳಿಕ ಸ್ಥಳೀಯರು ಅನುಮಾನದಿಂದ ಮನೆಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷ ಸೇವಿಸಿ ಒದ್ದಾಡುತ್ತಿದ್ದ ಜಹೀರ್ ನನ್ನು ಪಾಲಕ್ಕಾಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಸ್ತುತ ಆತನನ್ನು ತುರ್ತು ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಐಸಿಯುನಲ್ಲಿರುವ ಜಹೀರ್ ಗುಣಮುಖನಾದ ಬಳಿಕ ಆತನನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.