ಅಮೃತಸರ: ವಾಘಾ ಗಡಿಯಲ್ಲಿ ಸೈನಿಕರ ಧ್ವಜ ಗೌರವ ವೀಕ್ಷಣೆ ಸಂದರ್ಭದಲ್ಲಿ ನಡೆದ ದುರಂತದಲ್ಲಿ ಕೇರಳ ಮೂಲದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಭಾರತ ಮತ್ತು ಪಾಕಿಸ್ತಾನ ಗಡಿ ವಾಘಾದಲ್ಲಿ ಉಭಯ ದೇಶಗಳ ಸೈನಿಕರ ಧ್ವಜಗೌರವ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದ ಕೇರಳದ ಕಣ್ಣೂರು ಜಿಲ್ಲೆಯ ಕರಿವೆಳ್ಳೂರು ಪೇರಲಂ ನಿವಾಸಿ ಶ್ರೀನಂದನ ಎಂಬ 9 ವರ್ಷದ ಬಾಲಕಿ ಮೇಲೆ ಕಬ್ಬಿಣದ ತುಂಡು ಬಿದ್ದು ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ವಾಘಾ ಗಡಿಯಲ್ಲಿರುವ ಭಾರತದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಕಬ್ಬಿಣದ ತುಂಡೊಂದನ್ನು ಜೆಸಿಬಿ ಸಹಾಯದಿಂದ ಮೇಲಕ್ಕೆ ಎತ್ತಲಾಗಿತ್ತು. ಇದೇ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬಾಲಕಿ ಮೇಲೆ ಕಬ್ಬಿಣದ ತುಂಡು ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದ್ದು, ಬಾಲಕಿ ತಲೆಗೆ ಗಂಭೀರ ಗಾಯವಾಗಿ ರಕ್ತ ಸೋರುತ್ತಿತ್ತು. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತದಾರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.
ಪ್ರಕರಣ ಸಂಬಂಧ ಇದೀಗ ಜೆಸಿಬಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ವಾಘಾ ಗಡಿಯಲ್ಲಿ ನಡೆಯುವ ಸೈನಿಕರ ಧ್ವಜ ಗೌರವ ಕಾರ್ಯಕ್ರಮ ವೀಕ್ಷಿಸಲು ನಿತ್ಯ ಸಾವಿರಾರು ಮಂದಿ ಆಗಮಿಸುತ್ತಿದ್ದು, ಭಾರತ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಲ್ಲಲೂ ಕೂಡ ಸ್ಥಳವಿಲ್ಲದೇ ತುಂಬಿ ತುಳುಕುತ್ತಿರುತ್ತದೆ. ಇದೇಕಾರಣಕ್ಕೆ ಗ್ಯಾಲರಿಯನ್ನು ವಿಸ್ತರಿಸುವ ಕಾರ್ಯ ಅಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.