ಮುಂಬೈ: ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನದೊಂದಿಗೆ ಕೇವಲ ವಾಗ್ಯುದ್ಧವನ್ನಷ್ಟೇ ನಡೆಸುತ್ತಿದ್ದಾರೆಂದು ಶಿವಸೇನೆ ಸೋಮವಾರ ಹೇಳಿದೆ.
ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆಯು, ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ನಡೆಸುತ್ತಿದೆ. ಉಗ್ರರು ಗಡಿ ನುಸುಳಿ ಬಂದು ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ನಮ್ಮ ಯೋಧರು ಬಲಿಯಾಗುತ್ತಿದ್ದಾರೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುವ ಬದಲು ಕೇಂದ್ರ ಮಾತ್ರ ವಾಗ್ಯುದ್ಧ ನಡೆಸುವುದರಲ್ಲೇ ಕಾರ್ಯನಿರತವಾಗಿದೆ ಎಂದು ಹೇಳಿದೆ.
ಪಾಕಿಸ್ತಾನಕ್ಕೆ ನಿಜವಾಗಿಯೂ ಯುದ್ಧವೇ ಬೇಕಿದೆ ಎಂದಾದಲ್ಲಿ ನಾವು ಕೂಡ ಯುದ್ಧ ಮಾಡಲು ಸಿದ್ಧರಾಗಿದ್ದೇವೆ. ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಿಸುವ ಸಲುವಾಗಿಯೇ ಉರಿ ಸೆಕ್ಟರ್ ಮೇಲೆ ದಾಳಿ ನಡೆಸಲಾಗಿದೆ. ಈ ಸತ್ಯವನ್ನು ಪಾಕಿಸ್ತಾನ ಕೂಡ ಒಪ್ಪಿಕೊಂಡಂತಿದೆ. ಪಾಕಿಸ್ತಾನದ ವಿರುದ್ಧ ಸಾಕ್ಷ್ಯಾಧಾರಗಳನ್ನು ವಿಶ್ವಸಂಸ್ಥೆಯಲ್ಲಿ ಸಲ್ಲಿಸುವ ಕುರಿತಂತೆ ಭಾರತ ನಿರ್ಧಾರ ಕೈಗೊಂಡಿದೆ. ದ್ವಿಪಕ್ಷೀಯ ಸಂಬಂಧದಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುತ್ತಿದ್ದರೆ, ಪಾಕಿಸ್ತಾನದ ವಿರುದ್ಧ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ತನ್ನ ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿದೆ.