ನವದೆಹಲಿ: ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನಕ್ಕೆ ಶಿಕ್ಷೆ ನೀಡದೆ ಬಿಡುವುದಿಲ್ಲ ಎಂದು ಹೇಳಿದಂತೆಯೇ ನಡೆಯುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆಗೆ ಇದೀಗ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, 'ಪಾಕ್'ಗೆ ಮೋದಿ ಶಿಕ್ಷೆ' ಎಂಬ ಹ್ಯಾಶ್ ಟ್ಯಾಗ್ ಇದೀಗ ಟ್ಟಿಟರ್ ನಲ್ಲಿ ಹೊಸ ಟ್ರೆಂಡ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ ಉರಿ ಸೆಕ್ಟರ್ ನ ಭಾರತೀಯ ಸೇನಾ ಪ್ರಧಾನ ಕಚೇರಿ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಿತ್ತು. ಪರಿಣಾಮ 18 ಯೋಧರು ಹುತಾತ್ಮರಾಗಿದ್ದರು. ದಾಳಿ ನಡೆಸಿದ ಎಲ್ಲಾ ಉಗ್ರರನ್ನು ಸದೆಬಡಿಯುವಲ್ಲಿ ಸೇನೆ ಯಶಸ್ವಿಯಾಗಿತ್ತು.
ದಾಳಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ, ದಾಳಿ ಮಾಡಿದವರಿಗೆ ಶಿಕ್ಷೆ ನೀಡದೆಯೇ ಬಿಡುವುದಿಲ್ಲ. ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು.
ಇದರಂತೆ ಭಾರತೀಯ ಸೇನೆ ಇದೀಗ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಮೋದಿಯವರು ಈ ಹಿಂದೆ ನೀಡಿದ್ದ ಹೇಳಿಕೆಯಂತೆಯೇ ನಡೆದಿದ್ದಾರೆ. ದಾಳಿಕೋರರಿಗೆ ಶಿಕ್ಷೆ ನೀಡುತ್ತಿದ್ದಾರೆಂದು ಹೇಳಿ, ಟ್ವಿಟರ್ ನಲ್ಲಿ 'ಪಾಕ್'ಗೆ ಮೋದಿ ಶಿಕ್ಷೆ' ಎಂಬ ಹೊಸ ಹ್ಯಾಶ್ ಟ್ಯಾಗ್ ಟ್ರೆಂಡ್ ಆರಂಭವಾಗಿದೆ.
ಟ್ವಿಟರ್ ನಲ್ಲಿ ಸಾಕಷ್ಟು ಜನರು ಮೋದಿಯವರ ಈ ನಡೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.