ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಉಭಯ ದೇಶಗಳು ನೆರೆ ರಾಷ್ಟ್ರಗಳಾಗಿದ್ದು, ಎರಡೂ ರಾಷ್ಟ್ರಗಳು ಶಾಂತಿಯನ್ನು ಕಾಪಾಡಬೇಕಿದೆ. ಯುದ್ಧಕ್ಕೆ ಮುಂದಾಗಬೇಡಿ ಎಂದು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಶುಕ್ರವಾರ ಹೇಳಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಶಾಂತಿಯನ್ನು ಪ್ರೀತಿಸುವ ದೇಶ ಮತ್ತು ಇತರೆ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ. ಮಾತುಕತೆ ಮೂಲಕವೇ ಸಮಸ್ಯೆಗಳು ಬಗೆಹರಿಯಲಿದೆ ಎನ್ನುವುದಾದರೆ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಾದರೂ ಏಕೆ? ಎಂದು ಹೇಳಿದ್ದಾರೆ.
ಎಲ್ಲಾ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಪಾಕಿಸ್ತಾನ ಇಚ್ಛಿಸುತ್ತದೆ. ಉಭಯ ದೇಶಗಳು ಕಾದಾಡುವುದರಿಂದ ಎರಡೂ ದೇಶದ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಯುದ್ಧಕ್ಕೆ ಮುಂದಾಗಬೇಡಿ ಎಂದು ಸರಣಿ ಟ್ವೀಟ್ ಗಳನ್ನು ಮಾಡುವ ಮುಖಾಂತರ ಹೇಳಿಕೊಂಡಿದ್ದಾರೆ.