ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸುತ್ತಿರುವ ಬಾಲಿವುಡ್ ನಟ-ನಟಿಯರು, ಯೋಧರ ಶೌರ್ಯವನ್ನು ಕೊಂಡಾಡಿದ್ದಾರೆ.
ಭಾರತೀಯ ಸೇನೆಯ ದಾಳಿ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿರುವ ಬಾಲಿವುಡ್ ಸ್ಟಾರ್ ಗಳು, ಸೇನೆಯ ವೀರತೆ ಹಾಗೂ ಶೌರ್ಯವನ್ನು ಕೊಂಡಾಡಿದ್ದಾರೆ.
ಉಗ್ರರರ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ಭಾರತೀಯ ಸೇನೆಗೆ ಧನ್ಯವಾದಗಳು. ಯೋಧರು ಉತ್ತಮವಾಗಿರಲಿ ಹಾಗೂ ಸುರಕ್ಷಿತವಾಗಿರಲೆಂದು ಪ್ರಾರ್ಥನೆ ಮಾಡಬೇಕು ಎಂದು ಬಾಲಿವುಡ್ ಸೂಪರ್ ಸ್ಟಾರಾ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ.
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿದ ಭಾರತೀಯ ಯೋಧರ ಮೇಲೆ ನಮಗೆ ಹೆಮ್ಮೆಯಿದೆ. ಸರಿಯಾದ ಸಮಯಕ್ಕೆ ಸರ್ಕಾರ ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕೆ ಸಂಸತವಿದೆ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
ಭಾರತೀಯ ಸೇನೆಯನ್ನು ಎಂದಿಗೂ ಲಘುವಾಗಿ ಪರಿಗಣಿಸಬೇಡಿ ಎಂದು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಹೇಳಿದ್ದಾರೆ.
ನಮಸ್ಕಾರ...ನಮ್ಮ ಯೋಧರ ಮೇಲೆ ನನಗೆ ಹೆಮ್ಮೆಯಿದೆ. ನಮ್ಮ ಪ್ರಧಾನಮಂತ್ರಿ ಹಾಗೂ ರಕ್ಷಣಾ ಸಚಿವರ ಮೇಲೆ ನಮಗೆ ಹೆಮ್ಮೆಯಿದೆ. ಜೈ ಹಿಂದ್! ವಂದೇ ಮಾತರೇ! ಎಂದು ಖ್ಯಾತ ಗಾಯಕಿ ಲತಾ ಮಂಗೇಷ್ಕರ್ ಅವರು ಹೇಳಿದ್ದಾರೆ.
ಭಾರತೀಯ ಸರ್ಕಾರಕ್ಕೆ ಶುಭಾಶಯಗಳು. ಉಗ್ರರ ವಿರುದ್ಧ ಸೇನೆ ನಡೆಸಿದ ಹೋರಾಟಕ್ಕೆ ಹೆಮ್ಮೆಯಿದೆ ಎಂದು ನಟ ವರುಣ್ ಧವನ್ ಹೇಳಿದ್ದಾರೆ.
ಭಯೋತ್ಪಾದಕರಿಗೆ ಅವರು ಭಾಷೆಯಿಂದಲೇ ಉತ್ತರ ನೀಡಿ ಅರ್ಥ ಮಾಡಿಸಲಾಗಿದೆ. ಭಾರತೀಯ ಸೇನೆ ಮೇಲೆ ನಮಗೆ ಹೆಮ್ಮೆಯಿದೆ. ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಟ ನಡೆಸೋಣ. ಭಾರತೀಯ ಸೇನೆಗೆ ಜೈ ಎಂದು ಅರ್ಜುನ್ ರಾಂಪಾಲ್ ಅವರು ಹೇಳಿದ್ದಾರೆ.