ಶ್ರೀನಗರ: ಉರಿ ಉಗ್ರ ದಾಳಿ ಹಾಗೂ ಪಿಒಕೆಯಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಬಳಿಕ ಉಭಯ ರಾಷ್ಟ್ರಗಳ ಗಡಿ ಉದ್ವಿಗ್ನಗೊಂಡಿರುವಂತೆಯೇ ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ದೂಡಲು ಪಾಕಿಸ್ತಾನಿ ಸೈನಿಕರು ಯತ್ನಿಸುತ್ತಿದ್ದು, ಪದೇ ಪದೇ ಭಾರತೀಯ ಸೈನಿಕರತ್ತ ಗುಂಡಿನ ದಾಳಿ ನಡೆಸುತ್ತಿದ್ದಾರೆ.
ಕೇವಲ 56 ಗಂಟೆಗಳಲ್ಲಿ 6ನೇ ಬಾರಿಗೆ ಪಾಕಿಸ್ತಾನಿ ಸೈನಿಕರು ಕದನ ವಿರಾಮ ಉಲ್ಲಂಘನೆ ಮಾಡಿದ್ದು, ನಿನ್ನೆ ಅಖ್ನೂರ್ ಸೆಕ್ಟರ್ ಮೇಲೆ ದಾಳಿ ಮಾಡಿದ ಬಳಿಕ ಇಂದು ಮುಂಜಾನೆ ಫಲ್ಲನ್ ವಲ್ಲನ್ ಬಳಿ ಇರುವ ಸೇನಾ ಕ್ಯಾಂಪ್ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ನಿನ್ನೆ ಗುಂಡಿನ ಚಕಮಕಿ ನಡೆದಿದ್ದ ಅಖ್ನೂರು ಸೆಕ್ಟರ್ ಮೇಲೂ ಇಂದು ಮತ್ತೆ ಗುಂಡಿನ ದಾಳಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಫಲ್ಲನ್ ವಲ್ಲನ್ ಬಳಿ ಮುಂಜಾನೆ 4 ಗಂಟೆಗೆ ಆರಂಭವಾದ ಗುಂಡಿನ ಚಕಮಕಿ ಬೆಳಗ್ಗೆ 6.30ರವರೆಗೂ ಮುಂದುವರೆದಿತ್ತು. ಅದೃಷ್ಟವಶಾತ್ ಯಾವುದೇ ಭಾರತೀಯ ಸೈನಿಕರಿಗೂ ಹಾನಿಯಾಗಿಲ್ಲ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ತಮ್ಮ ಆಶ್ರಯದಲ್ಲಿದ್ದ ಉಗ್ರರನ್ನು ಸದೆಬಡಿದ ಹಿನ್ನಲೆಯಲ್ಲಿ ಪಾಕಿಸ್ತಾನ ಸೇನೆ ಇದನ್ನು ಅರಗಿಸಿಕೊಳ್ಳಲಾಗಿದೇ ಗುಂಡಿನ ಚಕಮಕಿ ನಡೆಸುತ್ತಿದೆ. ಆದರೆ ನಾವು ಕೂಡ ಅವರಿಗೆ ದಿಟ್ಟ ಉತ್ತರ ನೀಡಲು ಸಿದ್ಧರಾಗಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಯೋಧರೊಬ್ಬರು ತಿಳಿಸಿದ್ದಾರೆ.