ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು
ಅಮರಾವತಿ: ಆಂಧ್ರಪ್ರದೇಶದಲ್ಲಿ ಸಚಿವ ಸಂಪುಟ ಪುನಾರಚನೆಯಾಗಿರುವುದು ಟಿಡಿಪಿ ಪಕ್ಷದಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಏ.2 ರಂದು ಸಚಿವ ಸಂಪುಟ ಪುನಾರಚನೆ ಮಾಡಿದ್ದು, ಪುತ್ರ ನಾರಾ ಲೋಕೇಶ್ ಸೇರಿದಂತೆ 10 ಸದಸ್ಯರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆಯಲ್ಲಿ 5 ಸಚಿವರನ್ನು ಕೈಬಿಡಲಾಗಿದ್ದು ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕೆ ಅಸಮಾಧಾನಗೊಂಡಿರುವ ಟಿಡಿಪಿ ಹಿರಿಯ ನಾಯಕ ಬಿ ಗೋಪಾಲ ಕೃಷ್ಣ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲದೇ ವೈಎಸ್ ಆರ್ ಕಾಂಗ್ರೆಸ್ ನಿಂದ ಟಿಡಿಪಿಗೆ ಸೇರ್ಪಡೆಯಾಗಿದ್ದ ಶಾಸಕರಿಗೆ ಸ್ಥಾನಮಾನ ನೀಡಲು ಪಕ್ಷದ ಹಿರಿಯರು ಹಾಗೂ ನಿಷ್ಠರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು,
ರಾಜೀನಾಮೆ ನೀಡಿರುವ ಗೋಪಾಲ ಕೃಷ್ಣ ರೆಡ್ಡಿ ಅವರೊಂದಿಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೂರವಾಣಿ ಮೂಲಕ ಮಾತನಾಡಿದ್ದು, ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಕೆ ಮಾಡಿದ್ದಾರೆ. ಇನ್ನು ಸಚಿವ ಸ್ಥಾನ ಕಳೆದುಕೊಂಡ ಮತ್ತೊಬ್ಬ ಶಾಸಕ ಪ್ರಭಾಕರ್ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಸಚಿವ ಸ್ಥಾನ ವಂಚಿತರಾದ ಶಾಸಕರಾದ ಡಿ ನರೇಂದ್ರ, ಬಿ ಬೊಜ್ಜಿ ಅವರೂ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.