ದೇಶ

2 ವರ್ಷ ಹಣ ಕೂಡಿಟ್ಟು ಮಗಳಿಗೆ ಹೊಸ ಬಟ್ಟೆ ಕೊಡಿಸಿದ ಅಪ್ಪ: ವೈರಲ್ ಆಯ್ತು ಭಿಕ್ಷುಕ ತಂದೆಯ ಕಥೆ

Shilpa D
ಕೊಲ್ಕೊತಾ: ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವುದು ನಮಗೆಲ್ಲಾ ಒಂದು ಸಾಮಾನ್ಯ ಪ್ರಕ್ರಿಯೆ, ಬೇಕೆನಿಸಿದಾಗ ಹೋಗಿ ಮಕ್ಕಳಿಗೆ ಚೆಂದದ ಡ್ರೆಸ್ ಕೊಡಿಸಿ, ಮಕ್ಕಳಿಗೆ ತೊಡಿಸುತ್ತೇವೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಒಂದು ಹೊಸ ಫ್ರಾಕ್ ಕೊಡಿಸಲು ಬರೋಬ್ಬರಿ 2 ವರ್ಷ ಹಣ ಕೂಡಿಸಿಟ್ಟಿದ್ದಾನೆ. 
ಛಾಯಾಗ್ರಾಹಕ ಜಿಎಂಬಿ ಆಕಾಶ್ ಎಂಬುವವರು ಪಾರ್ಕ್ ನಲ್ಲಿ ಫೋಟೊ ತೆಗೆಯುವಾಗ ಅಪ್ಪ ಮಗಳ ಸಂಭ್ರಮದ ಕ್ಷಣವನ್ನು ಸೆರೆ ಹಿಡಿದಿದ್ದಾರೆ. ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು ಆತನ ಕಥೆಯನ್ನು ಪ್ರಕಾಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 
ಈತನ ಹೆಸರು ಎಂ.ಡಿ ಕವ್ಸಾರ್ ಹುಸೇನ್, ವೃತ್ತಿಯಲ್ಲಿ ಈತ ಬಿಕ್ಷುಕ. ಹತ್ತು ವರ್ಷದ ಹಿಂದೆ ಸಂಭವಿಸಿದ ಅಪಘಾತದಿಂತ ಈತ ತನ್ನ ಬಲಗೈ ಕಳೆದುಕೊಂಡ. ಕುಟುಂಬದ ಜವಾಬ್ದಾರಿ ಈತನ ಮೇಲೆ ಬಿದ್ದಿದ್ದು, ಕೆಲಸ ಸಿಗದ ಪರಿಣಾಮ ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ತನ್ನ ಸಂಸಾರ ನಡೆಸುತ್ತಿದ್ದಾನೆ. ಕಳೆದ ಎರಡು ವರ್ಷಗಳಿಂದ ಪ್ರತಿ ನಿತ್ಯ ತಾನು ಭಿಕ್ಷೆ ಬೇಡಿದ ಹಣದಲ್ಲಿ ಒಂದೊಂದು ರೂಪಾಯಿಯನ್ನು ಕೂಡಿಟ್ಟು ಕಡೆಗೂ ತನ್ನ ಮಗಳಿಗೆ ಹೊಸ ಬಟ್ಟೆ ಕೊಡಿಸಿದ್ದಾನೆ.
ಎರಡು ವರ್ಷಗಳ ಕಾಲ ಕೂಡಿಟ್ಟ ಹಣದಲ್ಲಿ ನಿನ್ನೆಯಷ್ಟೇ ನನ್ನ ಮಗಳಿಗೆ ಒಂದು ಹೊಸ ಬಟ್ಟೆಯನ್ನು ಕೊಡಿಸಿದೆ. ನನ್ನ ಹೆಂಡತಿಗೆ ತಿಳಿಯದೇ ಹಾಗೆ ಪಕ್ಕದ ಮನೆಯವರಿಂದ ಮೊಬೈಲ್ ತಂದು ನನ್ನ ಮಗಳ ಫೋಟೋಗಳನ್ನು ತೆಗೆದಿದ್ದೇನೆ, ನಮ್ಮ ಬಳಿ ಅವಳ ಒಂದು ಫೋಟೋವು ಇಲ್ಲ,  ಬಟ್ಟೆ ಕೊಳ್ಳಲು ಅಂಗಡಿಗೆ ತೆರಳಿದಾಗ ನಾನು ಕೊಟ್ಟ ಮುದುಡಿದ ನೋಟುಗಳನ್ನು ಕಂಡ ಅಂಗಡಿ ಮಾಲೀಕ, ನೀನು ಭಿಕ್ಷುಕನೇ ಎಂದು ಕೇಳಿ ನನ್ನನ್ನು ಅಂಗಡಿಯಿಂದ ಹೊರದಬ್ಬಿದ. ಆಗ ಗಾಬರಿಗೊಂಡ ಮಗಳು ಅಳುತ್ತಾ ನನ್ನ ಕೈ ಹಿಡಿದು ನನಗೆ ಯಾವುದೇ ಬಟ್ಟೆ ಬೇಡ ಎಂದು ಅಂಗಡಿಯಿಂದ ನನ್ನನ್ನು ಹೊರಗೆ ಕರೆದುಕೊಂಡು ಬಂದಳು. 
ಹತ್ತು ವರ್ಷಗಳ ಹಿಂದೆ ನಡೆದ ಅಪಘಾತದಿಂದ ನನಗೆ ಈ ಪರಿಸ್ಥಿತಿ ಎದುರಾಗುತ್ತದೆ, ಬೇರೆಯವರ ಮುಂದೆ ಭಿಕ್ಷೆ ಬೇಡಿ ಜೀವನ ನಡೆಸುವ ಸ್ಥಿತಿ ತಲುಪುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ನನ್ನ ಒಂದು ಕೈ ಇಲ್ಲದಿರುವುದನ್ನು ನೋಡಿ ನನ್ನ ಚಿಕ್ಕ ಮಗ, ಅಪ್ಪಾ ನಿನ್ನ ಇನ್ನೊಂದು ಕೈ ಅನ್ನು ಎಲ್ಲಿ ಬಿಟ್ಟು ಬಂದಿದ್ದೀಯಾ ಎಂದು ಕೇಳುತ್ತಾನೆ. ಒಂದೇ ಕೈಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ಅರಿತಿರುವ ನನ್ನ ಮಗಳು ಸುಮಯ್ಯಾ ನಿತ್ಯ ನನಗೆ ಊಟ ಮಾಡಿಸುತ್ತಾಳೆ.
ನನ್ನ ಮಗಳನ್ನು ಸಿಗ್ನಲ್ ನಲ್ಲಿ ನಿಲ್ಲಿಸಿ ನಾನು ಭಿಕ್ಷೆ ಬೇಡಲು ಹೋಗುತ್ತೇನೆ, ದೊಡ್ಡ ದೊಡ್ಡ ಕಾರು, ಬಸ್ ಬಂದು ನನಗೆ ಡಿಕ್ಕಿ ಹೊಡೆಯಬಹುದೆಂಬ ಭಯದಲ್ಲಿ ಆಕೆ ಯಾವತ್ತೂ ನನ್ನನ್ನು ಒಂಟಿಯಾಗಿ ಬಿಡುವುದಿಲ್ಲ, ಸ್ವಲ್ಹ ಹಣ ಸಂಪಾದಿಸಿ ನಾನು ನನ್ನ ಮಗಳ ಜೊತೆ ಮನೆಗೆ ಮರಳುತ್ತೇನೆ, ಒಂದೊಂದು ದಿನ ಹಣ ಸಿಗುವುದೇ ಇಲ್ಲ, ಆವತ್ತಿನ ರಾತ್ರಿ ನಾನು ಸಾಯಬೇಕು ಎಂದು ಯೋಚಿಸುತ್ತೇನೆ, ಆದರೆ ನನ್ನ ಮಕ್ಕಳು ನನ್ನನ್ನು ತಬ್ಬಿಕೊಂಡು  ಮಲಗಿರುವಾಗ ಸಾಯಲು ಮನಸಾಗುವುದಿಲ್ಲ,
ಆದರೆ ಇವತ್ತು ವಿಭಿನ್ನ ದಿನ, ಇಂದು ಎಲ್ಲವನ್ನು ಮರೆತು ನಾವು ಸಂತಸದಿಂದ ಇದ್ದೇವೆ, ನನ್ನ ಮಗಳು ಸಂತೋಷವಾಗಿದ್ದಾಳೆ, ಅವಳೇ ನನ್ನ ರಾಜಕುಮಾರಿ, ನಾನೇ ರಾಜ ಎಂದು ಹೇಳಿಕೊಂಡಿದ್ದಾನೆ.
SCROLL FOR NEXT