ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನವದೆಹಲಿ: ಆಫ್ಘಾನಿಸ್ತಾದನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗು ತಾಣಗಳ ಮೇಲೆ ಅತೀ ದೊಡ್ಡ ಬಾಂಬ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಅಮೆರಿಕವನ್ನು ಭಾರತೀಯ ರಾಜಕೀಯ ನಾಯಕರು ಕೊಂಡಾಡಿದ್ದಾರೆ.
ಅಮೆರಿಕ ಸೇನೆ ನಿನ್ನೆ ಆಫ್ಘಾನಿಸ್ತಾನದ ಅಚಿನ್ ಜಿಲ್ಲೆಯ ನಂಗರ್ಹಾರ್ ಪ್ರದೇಶದ ಮೇಲೆ ವಿಶ್ವದ 2ನೇ ಅತೀದೊಡ್ಡ ಬಾಂಬ್ ಮೊಅಬ್ ( ಮದರ್ ಆಫ್ ಆಲ್ ಬಾಂಬ್ಸ್) ದಾಳಿ ನಡೆಸಿತ್ತು. ಈ ವೇಳೆ ಹಲವು ಇಸಿಸ್ ಉಗ್ರರು ಸಾವನ್ನಪ್ಪಿದ್ದರು.
ಇಸಿಸ್ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಕಠಿಣ ಕ್ರಮ ಕೈಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಭಾರತೀಯ ರಾಜಕೀಯ ನಾಯಕರು ಅಮೆರಿಕವನ್ನು ಹೊಗಳಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ಅತೀ ದೊಡ್ಡ ಬಾಂಬ್ ದಾಳಿ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು, ಅಫ್ಘಾನಿಸ್ತಾನದ ಇಸಿಸ್ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮದರ್ ಆಫ್ ಆಲ್ ಬಾಂಬ್ ದಾಳಿ ಮಾಡಿರುವುದು ಅತ್ಯುತ್ತಮವಾಗಿದೆ. ಅಮೆರಿಕ, ಇಸ್ರೇಲ್, ಭಾರತ ಉಗ್ರರ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದೇ ರೀತಿ ಕಾಂಗ್ರೆಸ್ ನಾಯಕ ಮನೀಷ್ ತಿವಾರಿಯವರೂ ಕೂಡ ಪ್ರತಿಕ್ರಿಯೆ ನೀಡಿದ್ದು, ಭಯೋತ್ಪಾದನಾ ಸಂಘಟನೆಗಳ ಅಭಿವೃದ್ಧಿಗೆ ಅಂತ್ಯ ಹಾಡಲು ಮತ್ತಷ್ಟು ಕಠಿಣ ಕ್ರಮಗಳ ಅಗತ್ಯವಿದೆ. ಆಫ್ಘಾನಿಸ್ತಾನದ ಇಸಿಸ್ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಮೊಅಬ್ ದಾಳಿ ನಡೆಸಿದೆ ಎಂದರೆ, ಎಲ್ಇಟಿ, ಜೈಶ್-ಇ-ಮೊಹಮ್ಮದ್, ಜಮ್ಮತ್-ಉಲ್-ದವಾ ಉಗ್ರ ಸಂಘಟನೆಗಳ ನಡುವಿನ ವ್ಯತ್ಯಾಸವೇನಿದೆ? ಮುರಿದ್ಕೆ ಮೇಲೆ ಒಂದು ದಾಳಿ ಏಕೆ ಆಗಬಾರದು? ಎಂದು ಹೇಳಿದ್ದಾರೆ.