ಕಾಶ್ಮೀರಿ ಯುವಕನನ್ನು ಚಲಿಸುತ್ತಿರುವ ಜೀಪ್ ಮುಂಭಾಗಕ್ಕೆ ಬಿಗಿದ ಭಾರತೀಯ ಸೇನೆ
ಶ್ರೀನಗರ: ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸುವವರನ್ನು ನಿಗ್ರಹಿಸುವ ಭಾಗವಾಗಿ ಭಾರತೀಯ ಸೇನಾ ಸಿಬ್ಬಂದಿಗಳು ಕಲ್ಲು ತೂರಾಟ ನಡೆಸುವವರನ್ನು ಸೇನಾ ಜೀಪ್ ಗೆ ಬಿಗಿದು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ಸೇನೆ ಪ್ರತಿಕ್ರಿಯೆ ನೀಡಿದ್ದು ಸತ್ಯಾಸತ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದೆ.
ಕಲ್ಲು ತೂರಾಟ ನಡೆಸಬಾರದು ಎಂಬ ಒಂದೇ ಕಾರಣಕ್ಕೆ ಸೇನೆ ಯುವಕರನ್ನು ಸೇನೆಯ ವಾಹನಕ್ಕೆ ಕಟ್ಟಿರುವುದು ನಿಜಕ್ಕೂ ಆತಂಕಕಾರಿ ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ತನಿಖೆಗೆ ಆಗ್ರಹಿಸಿದ್ದರು.
ಯುವಕನನ್ನು ಚಲಿಸುತ್ತಿರುವ ಜೀಪ್ ನ ಮುಂಭಾಗಕ್ಕೆ ಕಟ್ಟಿ, ಕಲ್ಲು ತೂರಾಟಗಾರರು ತಮ್ಮ ಕೆಲಸವನ್ನು ಮುಂದುವರೆಸಿದರೆ ಅವರಿಗೂ ಇದೇ ಗತಿ ಎದುರಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಓಮರ್ ಅಬ್ದುಲ್ಲಾ ಆಗ್ರಹಿಸಿದ್ದರು. ಯುವಕನನ್ನು ಜೀಪ್ ಮುಂಭಾಗಕ್ಕೆ ಕಟ್ಟಿ ಎಳೆದೊಯ್ಯುತ್ತಿರುವ ವಿಡಿಯೋ ಬಗ್ಗೆ ಕಾಶ್ಮೀರದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋ ಬಗ್ಗೆ ಸೇನಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿಕೆ ನೀಡಿದ್ದು, ವಿಡಿಯೋ ಸತ್ಯಾಸತ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.