ನವದೆಹಲಿ: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ರಾಯಭಾರಿ ಕಚೇರಿ ನೆರವು ಪಡೆಯುವುದಕ್ಕೂ ತಡೆಯೊಡ್ಡಿರುವ ಪಾಕಿಸ್ತಾನದ ವಿರುದ್ಧ ಭಾರತೀಯ ರಕ್ಷಣಾ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಕುಲಭೂಷಣ್ ಜಾಧವ್ ಗೆ ರಾಯಭಾರಿ ಕಚೇರಿ ನೆರವನ್ನು ನಿರಾಕರಿಸುತ್ತಿರುವ ಮೂಲಕ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸುತ್ತಿದೆ, ಜೊತೆಗೆ ಉದ್ದೇಶಪೂರ್ವಕವಾಗಿ ಭಾರತದೊಂದಿಗಿನ ಉದ್ವಿಗ್ನ ಪರಿಸ್ಥಿತಿಯನ್ನು ಹೆಚ್ಚಿಸಲು ಯತ್ನಿಸುತ್ತಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದ ಬಗ್ಗೆ ರಕ್ಷಣಾ ತಜ್ಞ ಕಮರ್ ಆಘಾ ಪ್ರತಿಕ್ರಿಯೆ ನೀಡಿದ್ದು, ರಾಯ್ಭಾರಿ ಕಚೇರಿ ನೆರವು ನಿರಾಕರಿಸುವ ಮೂಲಕ ಪಾಕಿಸ್ತಾನ ನಡೆ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ. ಪಾಕಿಸ್ತಾನ ನ್ಯಾಯಾಲಯಗಳು ಅಲ್ಲಿನ ಸೇನೆಯ ಪರವಾಗಿರುವುದರಿಂದ ಪಾಕ್ ನ್ಯಾಯಾಲಯವನ್ನು ನಂಬಬಾರದು ಎಂದು ಹೇಳಿದ್ದಾರೆ.
ಮತ್ತೋರ್ವ ರಕ್ಷಣಾ ತಜ್ಞ ಶಂಕರ್ ಪ್ರಸಾದ್ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಭಾರತದೊಂದಿಗಿನ ಉದ್ವಿಗ್ನ ಪರಿಸ್ಥಿತಿಯನ್ನು ತೀವ್ರಗೊಳಿಸಲು ಯತ್ನಿಸುತ್ತಿದೆ. ಈ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.