ರಾಹುಲ್ ಗಾಂಧಿ ಮೆಂಟಲಿ ಅನ್ ಫಿಟ್; ದೆಹಲಿ ಕಾಂಗ್ರೆಸ್ ನಾಯಕಿ ಬರ್ಖಾ ಸಿಂಗ್ ಹೇಳಿಕೆ!
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷವನ್ನು ಮುನ್ನಡೆಸಲು ಮಾನಸಿಕವಾಗಿ ಅನರ್ಹರಾಗಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ಘಟಕದ ಮುಖ್ಯಸ್ಥೆ ಬರ್ಖಾ ಶುಕ್ಲಾ ಸಿಂಗ್ ಹೇಳಿದ್ದಾರೆ.
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷವನ್ನು ಮುನ್ನಡೆಸಲು ಮಾನಸಿಕವಾಗಿ ಅನರ್ಹರಾಗಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ಘಟಕದ ಮುಖ್ಯಸ್ಥೆ ಬರ್ಖಾ ಶುಕ್ಲಾ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬರ್ಖಾ ಸಿಂಗ್ ಶುಕ್ಲಾ ಅವರು, "ಪಕ್ಷದ ಅತ್ಯಂತ ಹಿರಿಯ ನಾಯಕರ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು 45 ವರ್ಷದ ರಾಹುಲ್ ಗಾಂಧಿ ಮಾನಸಿಕವಾಗಿ ಅನರ್ಹರಾಗಿದ್ದಾರೆ ಎಂದು ಬರ್ಖಾ ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಬಹಿರಂಗ ರಾಜಿನಾಮೆ ಪತ್ರ ಬರೆದಿರುವ ಅವರು, " ಕೆಲ ಮುಖಂಡರು ಪಕ್ಷದ ಮಹಿಳಾ ಕಾರ್ಯಕರ್ತರನ್ನು ದುರುಪಯೋಗಿಸುವುದು, ಬೆದರಿಕೆ ಹಾಕುವುದು ಮುಂತಾದ ಅನಪೇಕ್ಷೀತ ಕೃತ್ಯಗಳನ್ನು ಎಸಗುತ್ತಿದ್ದಾರೆ. ಮಹಿಳಾ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಕಿರುಕುಳವನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಡೆಗಣಿಸುತ್ತಿದ್ದಾರೆ ಅಥವಾ ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
"ಮಾರ್ಚ್ 28ರ ನವರಾತ್ರಿ ಶುಭದಿನದಂದು ನಾವು ಇತರ ಅನೇಕ ಉಪವಾಸ ವ್ರತಧಾರಿ ಪಕ್ಷದ ಕಾರ್ಯಕರ್ತೆಯರೊಂದಿಗೆ ರಾಹುಲ್ ಗಾಂಧಿಯವರನ್ನು ಕಾಣಲು ಪ್ರಯತ್ನಿಸಿದೆವು. ಆಗ ನಮಗೆ, "ನಿಮ್ಮ ನವರಾತ್ರಾ ವ್ರತದಲ್ಲಿ ರಾಹುಲ್ ಗೇನೂ ಆಸಕ್ತಿ ಇಲ್ಲ; ನೀವು ಇಲ್ಲಿಂದ ತೊಲಗಬಹುದು' ಎಂದು ಅತ್ಯಂತ ನಿಷ್ಠೂರವಾಗಿ ಅಗೌರವದಿಂದ ಹೇಳಲಾಯಿತು' ಎಂದು ಬರ್ಖಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇನ್ನು ಬರ್ಖಾ ಅವರು ಕಾಂಗ್ರೆಸ್ ತೊರೆದ ಬೆನ್ನಲ್ಲೇ ಹಲವು ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆಯಲು ನಿರ್ಧರಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ, ಇದೇ ಎಪ್ರಿಲ್ 23ರಂದು ಎಂಸಿಡಿ ಚುನಾವಣೆಗಳು ನಡೆಯಲಿದ್ದು, ಅದಕ್ಕೆ ಮುನ್ನವೇ ಕಾಂಗ್ರೆಸ್ ಮುಖಂಡರು ಪಕ್ಷ ತೊರೆಯುತ್ತಿರುವುದು ಪಕ್ಷಕ್ಕೆ ಬಾರಿ ಹಿನ್ನಡೆಯನ್ನು ತಂದೊಡ್ಡಿದೆ.