ರಾಯ್ ಪುರ: ಇತ್ತೀಚೆಗೆ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿ ವೇಳೆ ಸಾವನ್ನಪ್ಪಿದ್ದ ಸಿಆರ್ ಪಿಎಫ್ ಯೋಧ ಬನ್ಮಾಲಿ ಯಾದವ್ ಅವರ ಪತ್ನಿಗೆ ಛತ್ತೀಸ್ ಘಡ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಹುದ್ದೆ ನೀಡಿ ಕರ್ತವ್ಯ ಮೆರೆದಿದೆ.
ಬನ್ಮಾಲಿ ಯಾದವ್ ಅವರ ಪತ್ನಿ ಜಿತೇಶ್ವರಿ ಅವರಿಗೆ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ (ಎಎಸ್ಐ) ಹುದ್ದೆ ನೀಡಿದ್ದು, ಸ್ವತಃ ಸಿಎಂ ರಮಣ್ ಸಿಂಗ್ ಅವರೇ ಜಿತೇಶ್ವರಿ ಅವರಿಗೆ ನೇಮಕಾತಿ ಪತ್ರವನ್ನು ಇಂದು ನೀಡಿದ್ದಾರೆ. ಛತ್ತೀಸ್ ಘಡದ ಜಶ್ ಪುರ್ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ರಮಣ್ ಸಿಂಗ್ ಅವರು, ಸಮೀಪದ ಧೌರಾಸಂದ್ ಗ್ರಾಮದ ಹುತಾತ್ಮ ಯೋಧ ಯೋಧ ಬನ್ಮಾಲಿ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು ಯೋಧ ಬನ್ಮಾಲಿ ಯಾದವ್ ಅವರ ಪತ್ನಿ ಜಿತೇಶ್ವರಿ ಅವರಿಗೆ ನೇಮಕಾತಿ ಪತ್ರ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಏಪ್ರಿಲ್ 24ರಂದು ಸುಕ್ಮಾದಲ್ಲಿ ನಡೆದಿದ್ದ ಭೀಕರ ನಕ್ಸಲ್ ದಾಳಿ ವೇಳೆ ಸಿಆರ್ ಪಿಎಫ್ ಯೋಧ ಯೋಧ ಬನ್ಮಾಲಿ ಯಾದವ್ ಸೇರಿದಂತೆ ಒಟ್ಟು 25 ಮಂದಿ ಯೋಧರು ಸಾವಿಗೀಡಾಗಿದ್ದರು. ಸುಮಾರು 300 ಮಂದಿ ನಕ್ಸಲರು ಏಕಾಏಕಿ ದಾಳಿ ಮಾಡಿ ಯೋಧರನ್ನು ಗುಂಡಿಟ್ಟು ಕೊಂದು ಹಾಕಿದ್ದರು. ಈ ಘಟನೆ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಸ್ವತಃ ಮೃತ ಯೋಧರ ಕುಟುಂಬಸ್ಥರು ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದರು.
ಇದೀಗ ಛತ್ತೀಸ್ ಘಡ ಸಿಎಂ ರಮಣ್ ಸಿಂಗ್ ಅವರು ಯೋಧನ ಪತ್ನಿಗೆ ಎಎಸ್ ಐ ಹುದ್ದೆ ನೀಡುವ ಮೂಲಕ ತಮ್ಮ ಪತಿಯ ಸಾವಿಗೆ ತಮ್ಮ ಕೆಲಸದ ಮೂಲಕ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.